ಬೆಳಗಾವಿಯಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪನೆ: ಸಚಿವ ಎಂ.ಬಿ.ಪಾಟೀಲ್

ಸಚಿವ ಎಂ.ಬಿ.ಪಾಟೀಲ್ (File Photo)
ಬೆಳಗಾವಿ(ಸುವರ್ಣ ವಿಧಾನಸೌಧ), ಡಿ. 12: ಬಂಡವಾಳ ಹೂಡಿಕೆ ಮತ್ತು ಕೈಗಾರಿಕಾ ಬೆಳವಣಿಗೆ ಉದ್ದೇಶದಿಂದ ಬೆಳಗಾವಿ ಜಿಲ್ಲೆಯಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪನೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ.
ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಅರವಿಂದ ಬೆಲ್ಲದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೈಗಾರಿಕಾ ಪಾರ್ಕ್ ಸ್ಥಾಪನೆ ಸಂಬಂಧ ಈಗಾಗಲೇ ಸಾಕಷ್ಟು ಸಿದ್ಧತೆಗಳು ನಡೆದಿವೆ. ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ ಗೆ ಸಂಬಂಧಿಸಿದಂತೆ 3,000 ಎಕರೆ ಭೂಮಿಯನ್ನು ಒದಗಿಸಲಾಗಿದೆ. ಏರೋಸ್ಪೇಸ್ ಡಿಫೆನ್ಸ್ ಕಾರಿಡಾರ್ ಸ್ಥಾಪನೆಗೆ ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ ಎಂದರು.
ಜಾಗತಿಕ ಮಟ್ಟದಲ್ಲಿ ಎಕೋ ಸಿಸ್ಟಮ್ ಹಾಗೂ ಏರೋಸಿಸ್ಟಮ್ ಗೆ ಸಾಕಷ್ಟು ಬೇಡಿಕೆಯಿದೆ. ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಭಾಗದಲ್ಲಿ ಏರೋ ಸ್ಪೇಸ್ ಆಗುವ ಸಾಧ್ಯತೆಗಳು ಇವೆ. ಬೆಳಗಾವಿಯಲ್ಲಿ ಎಕೋ ಸಿಸ್ಟಮ್ ಸಾಕಷ್ಟು ಬೆಳೆಯುತ್ತಿದೆ. ನಗರ ಪ್ರದೇಶದಲ್ಲಿ ಸ್ಥಾಪಿತವಾಗುವ ಕೈಗಾರಿಕೆಗಳಿಗೆ ಉತ್ತೇಜನ ಸಿಗುವುದಿಲ್ಲ. ಆದರೆ, ಹಿಂದುಳಿದ ತಾಲೂಕುಗಳ ಗ್ರಾಮೀಣ ಭಾಗದಲ್ಲಿ ಸ್ಥಾಪನೆಯಾಗುವ ಕೈಗಾರಿಕೆಗಳಿಗೆ ಶೇ.3ರಿಂದ 5ರಷ್ಟು ಉತ್ತೇಜನ ಸಿಗಲಿದೆ ಎಂದರು
ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿ ತಂದಿದ್ದು, ಎಲ್ಲ ರಾಜ್ಯಗಳಿಗಿಂತಲೂ ಉತ್ತಮವಾಗಿದೆ. ಏರೋ ಸ್ಪೇಸ್ ನೀತಿ ವಿಶೇಷವಾಗಿದೆ. ಕ್ಲೀನ್ ಮೊಬಿಲಿಟಿ ನೀತಿಯನ್ನು ಜಾರಿ ಮಾಡಿದ್ದೇವೆ ಎಂದ ಅವರು, ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಕೈಗಾರಿಕೆ ಸ್ಥಾಪಿಸಲು ಯಾವುದೇ ಪ್ರಯತ್ನ ನಡೆಸಲಿಲ್ಲ ಎಂದು ಟೀಕಿಸಿದರು.







