ಗೋವಾ-ಹೊಸದಿಲ್ಲಿ ವಿಮಾನದಲ್ಲಿ ಅಮೆರಿಕನ್ ಯುವತಿಯ ಜೀವ ಉಳಿಸಿದ ಡಾ.ಅಂಜಲಿ ನಿಂಬಾಳ್ಕರ್

ಬೆಳಗಾವಿ, ಡಿ.13: ಗೋವಾ-ಹೊಸದಿಲ್ಲಿ ನಡುವಿನ ವಿಮಾನ ಪ್ರಯಾಣದ ವೇಳೆ ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಗೋವಾ ಪ್ರಭಾರಿ ಕಾರ್ಯದರ್ಶಿ ಡಾ.ಅಂಜಲಿ ನಿಂಬಾಳ್ಕರ್ ಅವರು ತುರ್ತು ವೈದ್ಯಕೀಯ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ಅಮೆರಿಕನ್ ಮಹಿಳೆಯೊಬ್ಬರ ಪ್ರಾಣವನ್ನು ಉಳಿಸಿದ್ದಾರೆ.
ಗೋವಾದಿಂದ ವಿಮಾನ ಹೊರಟ ತಕ್ಷಣವೇ ಯುವತಿಗೆ ಪ್ರಜ್ಞೆ ತಪ್ಪಿ, ನಾಡಿ ನಿಲ್ಲುವ ಹಂತಕ್ಕೆ ತಲುಪಿದ್ದರು ಎನ್ನಲಾಗಿದೆ. ಈ ವೇಳೆ ತಕ್ಷಣ ಸ್ಪಂದಿಸಿದ ಡಾ.ಅಂಜಲಿ ನಿಂಬಾಳ್ಕರ್ ಅವರು ಕಾರ್ಡಿಯೋ-ಪಲ್ಮನರಿ ರಿಸಸ್ಸಿಟೇಶನ್ (ಸಿಪಿಆರ್) ನಡೆಸಿ ಯುವತಿಗೆ ಜೀವ ತುಂಬಿದರು. ಸುಮಾರು ಅರ್ಧ ಗಂಟೆಯ ನಂತರ ಯುವತಿ ಮತ್ತೊಮ್ಮೆ ಕುಸಿದು ಬಿದ್ದರು. ಮತ್ತೆ ಡಾ.ಅಂಜಲಿ ನಿಂಬಾಳ್ಕರ್ ಪ್ರಾಥಮಿಕ ಚಿಕಿತ್ಸೆ ನೀಡಿದಾಗ ಮಹಿಳೆ ಚೇತರಿಸಿಕೊಂಡರು.
ವಿಮಾನದಲ್ಲಿನ ಉಳಿದ ಪ್ರಯಾಣಿಕರು ಡಾ.ಅಂಜಲಿ ನಿಂಬಾಳ್ಕರ್ ಮತ್ತು ರೋಗಿಯ ಪಕ್ಕದಲ್ಲೇ ನಿಂತು ಆರೋಗ್ಯ ಸ್ಥಿತಿಯನ್ನು ನಿಕಟವಾಗಿ ಗಮನಿಸಿದರು. ದಿಲ್ಲಿಯಲ್ಲಿ ವಿಮಾನ ಇಳಿದ ತಕ್ಷಣ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಯಿತು ಎಂದು ತಿಳಿದು ಬಂದಿದೆ.
ಇದರಲ್ಲಿ ವಿಶೇಷ ಏನಿಲ್ಲ. ವೈದ್ಯೆಯಾಗಿ ಇದು ನನ್ನ ಕರ್ತವ್ಯ. ಇದು ನನ್ನ ನೈತಿಕ, ವೃತ್ತಿಪರ ಹಾಗೂ ಮಾನವೀಯ ಜವಾಬ್ದಾರಿ.
-ಅಂಜಲಿ ನಿಂಬಾಳ್ಕರ್







