ಭಾರೀ ಮಳೆಗೆ ಸೇತುವೆಗಳ ಮುಳುಗಡೆ; ಚಿಕ್ಕೋಡಿ–ನಿಪ್ಪಾಣಿ ತಾಲೂಕುಗಳಲ್ಲಿ ಸಂಚಾರ ಅಸ್ತವ್ಯಸ್ತ

ಬೆಳಗಾವಿ : ಮಹಾರಾಷ್ಟ್ರದ ಪಶ್ಚಿಮ ಘಟ್ಟ ಭಾಗದಲ್ಲಿ ನಿರಂತರ ಮಳೆಯ ಅಬ್ಬರ ಮುಂದುವರಿದಿದ್ದು, ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕುಗಳಲ್ಲಿ ನೆರೆ ಪರಿಸ್ಥಿತಿ ತೀವ್ರಗೊಂಡಿದೆ. ದೂದಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಪ್ರಮುಖ ಸಂಪರ್ಕ ಸೇತುವೆಗಳು ನೀರಿನಡಿ ಮುಳುಗಿವೆ.
ನಿಪ್ಪಾಣಿ ತಾಲೂಕಿನಲ್ಲಿ ಅಕ್ಕೋಳ–ಸಿದ್ನಾಳ, ಕಾರದಗಾ–ಭೋಜ, ಬಾರವಾಡ–ಕುನ್ನೂರ ಸೇತುವೆಗಳು ಜಲಾವೃತಗೊಂಡಿವೆ. ಅದೇ ರೀತಿ ಚಿಕ್ಕೋಡಿ ತಾಲೂಕಿನ ಮಲ್ಲಿಕವಾಡ–ದತ್ತವಾಡ ಸೇತುವೆಯೂ ಮುಳುಗಡೆಯಾಗಿದೆ. ಸೇತುವೆಗಳ ಮೂಲಕ ವಾಹನ ಸಂಚಾರ ಮಾತ್ರವಲ್ಲದೆ, ಕಾಲ್ನಡಿಗೆಯ ಸಂಚಾರವೂ ಸಂಪೂರ್ಣ ಸ್ಥಗಿತಗೊಂಡಿದೆ.
ಈ ಮೂಲಕ ಕನಿಷ್ಠ ಎಂಟು ಗ್ರಾಮಗಳ ಜನರು ಪರ್ಯಾಯ ಮಾರ್ಗಗಳನ್ನು ಬಳಸುವಂತಾಗಿದ್ದು, ಅವರ ದೈನಂದಿನ ಬದುಕು ಸಂಕೀರ್ಣಗೊಂಡಿದೆ. ಶಾಲೆಗೆ ಹೋಗುವ ಮಕ್ಕಳು, ಉದ್ಯೋಗಕ್ಕೆ ತೆರಳುವ ಕಾರ್ಮಿಕರು ಹಾಗೂ ರೈತರಿಗೆ ಹೆಚ್ಚಿನ ತೊಂದರೆ ಉಂಟಾಗಿದೆ.
ಸ್ಥಳೀಯ ಆಡಳಿತ ಗ್ರಾಮಸ್ಥರಿಗೆ ಅನಗತ್ಯವಾಗಿ ನದಿಪಾತ್ರ ಅಥವಾ ಸೇತುವೆಗಳ ಬಳಿ ಸಂಚರಿಸದಂತೆ ಸೂಚನೆ ನೀಡಿದೆ. ಮಳೆ ಇನ್ನಷ್ಟು ಮುಂದುವರಿದರೆ, ಪರಿಸ್ಥಿತಿ ಗಂಭೀರಗೊಳ್ಳುವ ಆತಂಕ ಎದುರಾಗಿದೆ.





