ಬೀದರ್ ಜಿಲ್ಲೆಯ ಮನ್ನಾಖೇಳಿಯಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಲು ಕ್ರಮ : ಗೃಹ ಸಚಿವ ಡಾ.ಜಿ.ಪರಮೇಶ್ವರ್

ಜಿ.ಪರಮೇಶ್ವರ್
ಬೆಳಗಾವಿ : ಬೀದರ್ ಜಿಲ್ಲಾಧಿಕಾರಿ ಗೃಹ ಇಲಾಖೆಗೆ ಭೂಮಿಯನ್ನು ಹಸ್ತಾಂತರ ಮಾಡಿದ ಕೂಡಲೇ ಬೀದರ್ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿನ ಮನ್ನಾಖೇಳಿಯಲ್ಲಿ ಅಗ್ನಿಶಾಮಕ ಠಾಣೆಯನ್ನು ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಭರವಸೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಡಾ.ಶೈಲೇಂದ್ರ ಬೆಲ್ದಾಳೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, 2025ರ ನವೆಂಬರ್ 18ರಂದು ಬೀದರ್ ತಾಲೂಕಿನ ಮುಗದಾಳ ಗ್ರಾಮದಲ್ಲಿ ಮೂರು ಎಕರೆ ಭೂಮಿಯಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ವಕ್ಫ್ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ಪಡೆದಿದ್ದು, ಭೂಮಿ ಕಾಯ್ದಿರಿಸಲಾಗಿದೆ ಎಂದು ವಿವರ ನೀಡಿದರು.
ಪ್ರಸ್ತುತ ಮುನ್ನಖೇಳಿ ಪ್ರದೇಶದಲ್ಲಿ ಸಂಭವಿಸುತ್ತಿರುವ ಅಗ್ನಿ ಅವಘಡಗಳನ್ನು ಚಿಟಗುಪ್ಪ(24 ಕಿ.ಮಿ.), ಹುಮನ್ನಾಬಾದ್(30 ಕಿ.ಮೀ) ಹಾಗೂ ಬೀದರ್ (40 ಕಿ.ಮೀ) ಅಗ್ನಿಶಾಮಕ ಠಾಣೆಗಳಿಂದ ರಕ್ಷಣಾ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದ ಅವರು, 2020ರಿಂದ ಈವರೆಗೆ ಒಟ್ಟು 292 ಅಗ್ನಿ ಕರೆಗಳನ್ನು ಸ್ವೀಕರಿಸಿದ್ದು, ಅಗ್ನಿ ಅವಘಡದಿಂದ ಒಟ್ಟು 15.75 ಕೋಟಿ ರೂ.ಗಳನ್ನು ಅಸ್ತಿಪಾಸ್ತಿಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.
ಕೇಂದ್ರ ಸರಕಾರದ ಅಗ್ನಿಶಾಮಕ ಠಾಣೆಯ ಸ್ಥಾಪನೆಗೆ ನಗರ ಪ್ರದೇಶದಲ್ಲಿ 10 ಚದರ ಕಿ.ಮೀಗೆ ಒಂದು ಅಗ್ನಿಶಾಮಕ ಠಾಣೆ ಇರಬೇಕಾಗುತ್ತದೆ. ಗ್ರಾಮೀಣ ಪ್ರದೇಶದ ವ್ಯಾಪ್ತಿಯ ಪ್ರತಿ 50 ಚದರ ಕಿ.ಮೀಗೆ ಒಂದು ಅಗ್ನಿಶಾಮಕ ಠಾಣೆ ಇರಬೇಕಾಗುತ್ತದೆ. ಕೇಂದ್ರದ ಮಾನದಂಡವನ್ನು ಇಟ್ಟುಕೊಂಡರೆ ಮುನ್ನಖೇಳಿ ಅಗ್ನಿಶಾಮಕ ಠಾಣೆ ಸ್ಥಾಪಿಸಲು ಸಾಧ್ಯವಿಲ್ಲ. ಆದರೆ, ಸದಸ್ಯರ ಮನವಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಭೂಮಿ ಹಸ್ತಾಂತರ ಮಾಡಿದ ಕೂಡಲೇ ಅಗ್ನಿ ಶಾಮಕ ಠಾಣೆ ಸ್ಥಾಪಿಸಲಾಗುವುದು ಎಂದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸದಸ್ಯ ಡಾ.ಶೈಲೇಂದ್ರ ಬೆಲ್ದಾಳೆ, ಇತ್ತೀಚೆಗೆ ಇಲ್ಲಿನ ಮುನ್ನಖೇಳಿ ವ್ಯಾಪ್ತಿಯಲ್ಲಿ ಸಂಭವಿಸಿದ ಅಗ್ನಿ ಅವಘಡ ಸಂದರ್ಭದಲ್ಲಿ ಸುಮಾರು 3 ಗಂಟೆ ತಡವಾಗಿ ಅಗ್ನಿಶಾಮಕ ವಾಹನ ಬಂದಿದೆ. ಇದರಿಂದಾಗಿ ರೈತನೊಬ್ಬನ ಕಾಲಿಗೆ ಬೆಂಕಿ ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೀಗಾಗಿ ತುರ್ತಾಗಿ ಆ ಪ್ರದೇಶದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸುವುದು ಅತ್ಯಗತ್ಯವಾಗಿದೆ ಎಂದು ಆಗ್ರಹಿಸಿದರು.







