ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆ | ಕತ್ತಿ ಬಣ ಮೇಲುಗೈ; ಎಲ್ಲ 15 ಸ್ಥಾನಗಳಲ್ಲೂ ಭರ್ಜರಿ ಗೆಲುವು

ಹುಕ್ಕೇರಿ (ಬೆಳಗಾವಿ) : ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಎಲ್ಲ 15 ಸ್ಥಾನಗಳಲ್ಲೂ ರಮೇಶ್ ಕತ್ತಿ ಹಾಗೂ ಶಾಸಕ ನಿಖಿಲ್ ಕತ್ತಿ ನೇತೃತ್ವದ ಬಣ ಭರ್ಜರಿ ಗೆಲುವು ಸಾಧಿಸಿದೆ.
ರವಿವಾರ ನಡೆದ ಚುನಾವಣೆಯಲ್ಲಿ ಶೇ.67.54ರಷ್ಟು ಮತದಾನ ದಾಖಲಾಗಿದ್ದು, ಸೋಮವಾರ ಬೆಳಿಗ್ಗೆ 6 ಗಂಟೆಗೆ ಅಂತಿಮ ಫಲಿತಾಂಶ ಪ್ರಕಟವಾಯಿತು. ನಸುಕಿನವರೆಗೂ ನಡೆದ ಮತ ಎಣಿಕೆಯಲ್ಲಿ ಆರಂಭದಲ್ಲಿ ಮೀಸಲು ಸ್ಥಾನಗಳ ಫಲಿತಾಂಶ ಹೊರಬಿದ್ದರೂ, ನಂತರ ಸಾಮಾನ್ಯ ಕ್ಷೇತ್ರಗಳಲ್ಲಿಯೂ ಕತ್ತಿ ಅವರ ಬಣವೇ ಗೆಲುವು ಕಂಡಿತು.
ಈ ಮೂಲಕ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ನೇತೃತ್ವದ ಬಣಕ್ಕೆ ದೊಡ್ಡ ಆಘಾತ ತಟ್ಟಿದೆ.
ಲವ ರಮೇಶ್ ಕತ್ತಿ, ಕಲಗೌಡ ಬಸಗೌಡ ಪಾಟೀಲ್, ವಿನಯ ಅಪ್ಪಯ್ಯಗೌಡ ಪಾಟೀಲ್, ಶಿವಾನಂದ ಶಿವಪುತ್ರ ಮುಡಶಿ, ಮಹಾವೀರ ವಸಂತ ನಿಲಜಗಿ, ಶಿವನಗೌಡ ಸತ್ಯಪ್ಪ ಮದವಾಲ, ಲಕ್ಷ್ಮಣ ಬಸವರಾಜ ಮುನ್ನೋಳಿ, ಕೆಂಪಣ್ಣ ಸಾತಪ್ಪ ವಾಸೇದಾರ, ಮಹಾದೇವ ಬಾಬು ಕ್ಷೀರಸಾಗರ, ಮೆಹಬೂಬಿ ಗೌಸ್ಅಜಂ ನಾಯಿಕವಾಡಿ, ಮಂಗಲಾ ಗುರುಸಿದ್ದಪ್ಪ ಮೂಡಲಗಿ, ಗಜಾನನ ನಿಂಗಪ್ಪ ಕ್ವಳ್ಳಿ, ಸತ್ಯಪ್ಪ ಭರಮಣ್ಣ, ಶ್ರೀಮಂತ ಗಂಗಪ್ಪ ಸನ್ನಾಯಿಕ ಹಾಗೂ ಬಸವಣ್ಣಿ ಸಣ್ಣಪ್ಪ ಲಂಕೆಪ್ಪಗೋಳ ಅವರು ಕತ್ತಿ ಮತ್ತು ಎ.ಬಿ.ಪಾಟೀಲ್ ಬಣದಿಂದ ವಿಜೇತರಾಗಿ ಹೊರಹೊಮ್ಮಿದ್ದಾರೆ.
ವಿಜಯೋತ್ಸವ – ಗದ್ದಲ :
ಫಲಿತಾಂಶ ಹೊರಬಂದ ಕೂಡಲೇ ಕತ್ತಿ ಕುಟುಂಬದ ಬೆಂಬಲಿಗರು ಜೈಕಾರ, ಕುಣಿತದಲ್ಲಿ ತೊಡಗಿದರು. ಜನಸಂದಣಿಯಿಂದ ಸಚಿವ ಸತೀಶ್ ಜಾರಕಿಹೊಳಿ ಅವರ ಕಾರಿಗೆ ಗುದ್ದಾಟ ನಡೆದಿದ್ದು, ಕಲ್ಲು ತೂರಾಟವೂ ನಡೆದಿದೆ. ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.







