Belagavi | 4ನೇ ಮಗು ಕೂಡ ಹೆಣ್ಣಾಗಿದ್ದಕ್ಕೆ ನವಜಾತ ಶಿಶುವಿನ ಕತ್ತು ಹಿಸುಕಿ ಕೊಂದ ತಾಯಿ!

ಸಾಂದರ್ಭಿಕ ಚಿತ್ರ | PC : freepik
ಬೆಳಗಾವಿ : ನಾಲ್ಕನೇ ಬಾರಿ ಹೆಣ್ಣುಮಗು ಹುಟ್ಟಿದ್ದಕ್ಕೆ ನವಜಾತ ಶಿಶುವನ್ನೇ ತಾಯಿ ಕತ್ತು ಹಿಸುಕಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ರಾಮದುರ್ಗ ತಾಲ್ಲೂಕಿನ ಮುದಕವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆದಿರುವುದಾಗಿ ವರದಿಯಾಗಿದೆ.
ಮುದಕವಿ ಗ್ರಾಮದ ಅಶ್ವಿನಿ ಹಣಮಂತ ಹಳಕಟ್ಟಿ ರವಿವಾರ (ನ.23) ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಬಾಣಂತಿ ಮತ್ತು ಶಿಶು ಇಬ್ಬರೂ ಎರಡು ದಿನ ಆರೋಗ್ಯವಾಗಿದ್ದರು. ಮಂಗಳವಾರ ಬೆಳಿಗ್ಗೆ ಶಿಶು ಅಳು ನಿಲ್ಲಿಸಿದ್ದರಿಂದ ಸಿಬ್ಬಂದಿ ಪರಿಶೀಲನೆ ನಡೆಸಿದ್ದು, ಕತ್ತು ಹಿಸುಕಿರುವುದು ಪತ್ತೆಯಾಗಿದೆ.
"ಅಶ್ವಿನಿ–ಹಣಮಂತ ದಂಪತಿಗೆ ಈಗಾಗಲೇ ಮೂವರು ಹೆಣ್ಣುಮಕ್ಕಳಿದ್ದು, ಈ ಬಾರಿ ಗಂಡು ಮಗುವಿನ ನಿರೀಕ್ಷೆ ಇಟ್ಟಿದ್ದರು. ಆದರೆ ಮತ್ತೆ ಹೆಣ್ಣು ಮಗು ಹುಟ್ಟಿರುವುದರಿಂದ ಅಶ್ವಿನಿ ಮನನೊಂದುಗೊಂಡಿದ್ದು, ಶಿಶುವನ್ನು ಸಾಕಲು ಸಾಧ್ಯವಿಲ್ಲವೆಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಹಣಮಂತ ಅವರ ತಮ್ಮನಿಗೂ ಮೂವರು ಮಕ್ಕಳು ಇದ್ದು, ಅವರ ಪತ್ನಿ ಕಳೆದ ವರ್ಷ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಮಕ್ಕಳನ್ನೂ ಅಶ್ವಿನಿಯೇ ನೋಡಿಕೊಳ್ಳುತ್ತಿದ್ದರು. ಇದರಿಂದ ಆರೂ ಮಕ್ಕಳ ಜವಾಬ್ದಾರಿ ಈಗಲೇ ಅಶ್ವಿನಿಯ ಮೇಲೆ ಇದ್ದ ಹಿನ್ನೆಲೆಯಲ್ಲಿ, ಏಳನೇ ಮಗು ಕೂಡ ಹೆಣ್ಣಾಗಿದ್ದರಿಂದ ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾರೆ ಎಂದು ರಾಮದುರ್ಗ ಡಿವೈಎಸ್ಪಿ ಚಿದಂಬರ ಮಡಿವಾಳರು ತಿಳಿಸಿದ್ದಾರೆ.
ಆರೋಪಿ ಅಶ್ವಿನಿ ಬಾಣಂತಿಯಾಗಿರುವುದರಿಂದ ಬಂಧಿಸದೇ, ತಾಲ್ಲೂಕು ಆಸ್ಪತ್ರೆಯಲ್ಲಿ ಪೊಲೀಸ್ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಸಲಹೆಯ ನಂತರ ಬಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವೇಳೆ ಹೆರಿಗೆ ವಾರ್ಡಿನಲ್ಲಿ ಅಶ್ವಿನಿ ಒಬ್ಬರೇ ಇದ್ದರು. ಲಾರಿ ಚಾಲಕರಾದ ಹಣಮಂತ ಘಟನೆ ನಂತರ ಆಸ್ಪತ್ರೆಗೆ ಧಾವಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.







