ಮಲೀನಗೊಂಡಿರುವ ನದಿಗಳನ್ನು ಪುನರುಜ್ಜೀವನಕ್ಕೆ ಕ್ರಿಯಾಯೋಜನೆ: ಸಚಿವ ಈಶ್ವರ್ ಖಂಡ್ರೆ

ಬೆಳಗಾವಿ : ನದಿಯ ಪಾತ್ರದಲ್ಲಿರುವ ಹಳ್ಳಿಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನವಸತಿ ಪ್ರದೇಶಗಳಿಂದ ಉತ್ಪತ್ತಿಯಾಗುತ್ತಿರುವ ಗೃಹತ್ಯಾಜ್ಯ ನೀರು ನೇರ ಅಥವಾ ಪರೋಕ್ಷವಾಗಿ ನದಿಗಳಿಗೆ ಸೇರುತ್ತಿದ್ದು, ಇದರಿಂದ ನದಿ ನೀರು ಮಾಲಿನ್ಯವನ್ನು ಗಮನಿಸಿ ಮಲೀನಗೊಂಡಿರುವ ನದಿಗಳನ್ನು ಪುನರುಜ್ಜೀವನಗೊಳಿಸಲು ಕ್ರಿಯಾ ಯೋಜನೆ ರೂಪಿಸಿ ಅನುಷ್ಟಾನಗಿಳಿಸಲಾಗುತ್ತಿದೆ ಎಂದು ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಹೇಳಿದರು.
ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಸದಸ್ಯ ದರ್ಶನ್ ಪುಟ್ಟಣ್ಣಯ್ಯ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ್ಯದಲ್ಲಿ ಕಾವೇರಿ, ಕೃಷ್ಣಾ, ಅರ್ಕಾವತಿ, ತುಂಗಾಭದ್ರಾ, ನೇತ್ರಾವತಿ ಸೇರಿದಂತೆ 12 ನದಿಗಳಿದ್ದು, ನದಿಗಳಿಗೆ ಒಳಚರಂಡಿ ನೀರು, ಕಾರ್ಖಾನೆ ನೀರು ಸೇರುತ್ತಿದೆ. ತ್ಯಾಜ್ಯ ನೀರಿನ ಸಂಸ್ಕರಣ ಘಟಕಗಳನ್ನು ಅಳವಡಿಸಿಕೊಂಡು ನಿಗದಿತ ಗುಣಮಾನಕಗಳಿಗೆ ಸಂಸ್ಕರಿಸಿ/ಶುದ್ಧಿಕರಿಸಿ ಮರುಬಳಕೆ ಮಾಡುವುದು ಕೈಗಾರಿಕೆಗಳ ಕರ್ತವ್ಯ ಎಂದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಚರಂಡಿಗಳ ಮುಖಾಂತರ ನದಿಗೆ ಸೇರುತ್ತಿರುವ ರೊಚ್ಚು ನೀರಿನ ಸಂಸ್ಕರಣೆಗಾಗಿ Wetland Treatment System ಅನ್ನು ಅಳವಡಿಸಿಕೊಳ್ಳಲು ಸೂಚಿಸಿದೆ. ಈ ನಿಟ್ಟಿನಲ್ಲಿ ನದಿಗಳ ಮಾಲಿನ್ಯಕ್ಕೆ ಮುಖ್ಯವಾಗಿ ಕಾರಣವಾಗಿರುವ ಜನವಸತಿ ಪ್ರದೇಶಗಳಿಂದ ಉತ್ಪತ್ತಿಯಾಗುತ್ತಿರುವ ಮಾಲಿನ್ಯ ನೀರನ್ನು ನದಿಗೆ ಬಿಡುತ್ತಿರುವುದನ್ನು ತಡೆಗಟ್ಟಿ ಸಂಪೂರ್ಣವಾಗಿ ಸಂಸ್ಕರಿಸಿ ಪುನರ್ಬಳಕೆಯ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ಉತ್ತರಿಸಿದರು.







