ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ : ಮಹಾರಾಷ್ಟ್ರದ ಗಡಿ ಪ್ರದೇಶದಲ್ಲಿ ಬಿಗಿ ಭದ್ರತೆ

ಬೆಳಗಾವಿ: ರಾಜ್ಯೋತ್ಸವದ ಅಂಗವಾಗಿ ಬೆಳಗಾವಿ ನಗರದಲ್ಲಿ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಅದ್ಧೂರಿ ರಾಜ್ಯೋತ್ಸವ ಸಂಭ್ರಮ ನಡೆಯುತ್ತಿದ್ದು, ಜಿಲ್ಲಾಡಳಿತದಿಂದ ಬಿಗಿ ಭದ್ರತೆ ಒದಗಿಸಲಾಗಿದೆ.
ಪ್ರತಿ ವರ್ಷ ನ.1ರಂದು ಕರಾಳ ದಿನಾಚರಣೆ ನಡೆಸುವ ಎಂಇಎಸ್ ಸಂಘಟನೆಗೆ ಈ ಬಾರಿ ಜಿಲ್ಲಾಡಳಿತವು ಅನುಮತಿ ನೀಡಿಲ್ಲ. ಜಿಲ್ಲಾಧಿಕಾರಿ ಮುಹಮ್ಮದ್ ರೋಷನ್ ಅವರು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿಗೆ ತಂದಿದ್ದಾರೆ.
ಮಹಾರಾಷ್ಟ್ರ ನಾಯಕರಿಗೆ ಬೆಳಗಾವಿ ಪ್ರವೇಶ ನಿಷೇಧ :
ಮಹಾರಾಷ್ಟ್ರದ ಉದ್ಧವ ಠಾಕ್ರೆ ಬಣದ ಶಿವಸೇನೆ ಮುಖಂಡ ವಿಜಯ ದೆವಣೆ ನೇತೃತ್ವದ ಗುಂಪು ಬೆಳಗಾವಿ ಜಿಲ್ಲೆಗೆ ಪ್ರವೇಶ ಮಾಡಲು ಮುಂದಾಗಿದ್ದರೂ, ಜಿಲ್ಲಾಡಳಿತವು ಯಾವುದೇ ರೀತಿಯ ಚಟುವಟಿಕೆಗೆ ಅನುಮತಿ ನೀಡಿಲ್ಲ.
ಗಡಿ ಪ್ರದೇಶದಲ್ಲಿ ಬಿಗಿ ಪೊಲೀಸ್ ಭದ್ರತೆ :
ಕರ್ನಾಟಕ-ಮಹಾರಾಷ್ಟ್ರ ಗಡಿ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಉಭಯ ರಾಜ್ಯಗಳ ಪೊಲೀಸರು ಬಿಗಿ ಭದ್ರತೆ ವಹಿಸಿದ್ದಾರೆ. ಗಡಿಯಲ್ಲಿ ಅನಾಹುತ ತಡೆಗಟ್ಟುವ ನಿಟ್ಟಿನಲ್ಲಿ ನಿಗಾವಹಿಸಲಾಗಿದೆ.ಪ್ರತಿ ವರ್ಷ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರಿಂದ ಬೆಳಗಾವಿ ಗಡಿಯಲ್ಲಿ ಉದ್ಧಟತನ ಪ್ರದರ್ಶನ ನಡೆಯುತ್ತಿದ್ದು, ಈ ಬಾರಿ ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ರಾಜ್ಯೋತ್ಸವ ಸಂಭ್ರಮದ ನಡುವೆ ಜಿಲ್ಲಾಡಳಿತದಿಂದ ಎಚ್ಚರಿಕೆ ವಹಿಸಿದೆ. ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿರುವ ಬೆಳಗಾವಿ ಜನತೆ “ಬೆಳಗಾವಿ ಕನ್ನಡದ ಅಂಗ” ಎಂದು ಘೋಷಣೆ ಕೂಗುತ್ತಾ ನಾಡಿನ ಏಕತೆ ಪ್ರದರ್ಶಿಸುತ್ತಿದ್ದಾರೆ.
ಜಿಲ್ಲಾಡಳಿತದ ದೃಢ ಕ್ರಮದಿಂದ ಬೆಳಗಾವಿಯಲ್ಲಿ ಶಾಂತಿಯುತ ಕನ್ನಡ ರಾಜ್ಯೋತ್ಸವ ನಿರೀಕ್ಷೆ ಇದೆ.







