ಸರಕಾರಿ ಜಾಗ ಒತ್ತುವರಿ ಮಾಡಿಲ್ಲ, ತನಿಖೆಗೆ ಸಿದ್ಧ : ಕೃಷ್ಣ ಭೈರೇಗೌಡ

ಬೆಳಗಾವಿ : ಕೋಲಾರ ಜಿಲ್ಲೆಯ ಗರುಡುಪಾಳ್ಯ ಗ್ರಾಮದಲ್ಲಿ ಒಂದು ಇಂಚು ಭೂಮಿ ಒತ್ತುವರಿ ಮಾಡಿಲ್ಲ. ಈ ಸಂಬಂಧ ಯಾವುದೇ ತನಿಖೆಗೆ ಸಿದ್ಧನಿದ್ದು, ಶಿಫಾರಸು ಮಾಡಿ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ಗೆ ಮನವಿ ಮಾಡಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಶುಕ್ರವಾರ ವಿಧಾನಸಭೆಯ ಕಲಾಪದಲ್ಲಿ ತಮ್ಮ ಮೇಲೆ ಬಂದಿರುವ ಕೆರೆ, ಸ್ಮಶಾನ ಒತ್ತುವರಿ ಆರೋಪ ಸಂಬಂಧ ದಾಖಲೆ ಸಮೇತ ಸ್ಪಷ್ಟನೆ ನೀಡಿದರು.
ಗರುಡುಪಾಳ್ಯ ಗ್ರಾಮ ಮೈಸೂರು ಮಹಾರಾಜರ ಮನೆತನಕ್ಕೆ ಸೇರಿದ ಗ್ರಾಮ. 1923 ರಲ್ಲಿ ಮಹಾರಾಜರು ಖರೀದಿ ಮಾಡಿದ್ದರು. ಆಗ ಕೃಷಿ ತರಬೇತಿ ಕೇಂದ್ರ ನಡೆಯುತ್ತಿತ್ತು. ಮಹಾರಾಜರೇ 1953ರಲ್ಲಿ ಇದನ್ನು ನಮ್ಮ ಅಜ್ಜ ಚೌಡೇಗೌಡ ಅವರಿಗೆ 10 ವರ್ಷಕ್ಕೆ ಗುತ್ತಿಗೆ ಕೊಟ್ಟಿದ್ದರು. ಅಲ್ಲಿಂದ ಇಲ್ಲಿವರೆಗೆ ಆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದೇವೆ. ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಅವರ ಟ್ರಸ್ಟ್ಗೆ ಸೇರಿದ ಜಮೀನು ಇದು. ಅವರ ಪರವಾಗಿ ಅಂದಿನ ರಾಜರ ಕಾರ್ಯದರ್ಶಿ ಅಧಿಕಾರಿ ನಾರಾಯಣಸ್ವಾಮಿ ಎಂಬವರು ಗುತ್ತಿಗೆ ನಮ್ಮ ಅಜ್ಜನಿಗೆ ಕೊಟ್ಟಿದ್ದಾರೆ ಎಂದು ವಿವರಿಸಿದರು.
ಗುತ್ತಿಗೆ ಅವಧಿ ಮುಗಿಯುವ ಮೊದಲೇ ರಾಜಮನೆತನದವರು ಅದನ್ನು ಮಾರಾಟ ಮಾಡಲು ಮುಂದಾಗುತ್ತಾರೆ. ನಮ್ಮ ಹಣವಿಲ್ಲದ ಕಾರಣ ನಮ್ಮ ಅಜ್ಜ ಖರೀದಿ ಮಾಡಲು ಆಗಿಲ್ಲ. 1959ರಲ್ಲಿ ಹಬೀಬ್ ಉಲ್ಲಾ ಖಾನ್ಗೆ ಮಹಾರಾಜರು ಅದನ್ನು ಮಾರಾಟ ಮಾಡುತ್ತಾರೆ. ಅದರ ವಿರುದ್ಧ ನಮ್ಮ ಅಜ್ಜ ಕಾನೂನು ಹೋರಾಟ ನಡೆsiದಾಗ ಆ ಜಮೀನು ಚೌಡೇಗೌಡರಿಗೆ ಬರುತ್ತದೆ ಎಂದು ಅವರು ಉಲ್ಲೇಖಿಸಿದರು.
ಆ ಗ್ರಾಮದಲ್ಲಿನ 133.13 ಎಕರೆ ಒಣ ಹಾಗೂ 18.35 ಎಕರೆ ಹಸಿ ಮತ್ತು 21.21 ಎಕರೆ ತೋಟ, 82.20 ಎಕರೆ ವ್ಯವಸಾಯ ಮಾಡದ ಭೂಮಿ ಸೇರಿ ಗ್ರಾಮದ ಸಂಪೂರ್ಣ ಸರ್ವೆ ನಂಬರ್ಗಳು 256.9 ಎಕರೆ ಭೂಮಿ ಕ್ರಯಪತ್ರ ಆಗಿದೆ. ಮಹಾರಾಜರು ಸಂಪೂರ್ಣ ಗ್ರಾಮವನ್ನು ಮಾರಾಟ ಮಾಡಿದ್ದಾರೆ. 82.20 ಎಕರೆ ವ್ಯವಸಾಯ ಮಾಡದ ಭೂಮಿಯಲ್ಲಿ ಎರಡು ಕೆರೆ ಇದೆ. ಊರು ಸೇರಿದೆ. ಕಲ್ಲು ಗುಡ್ಡವೂ ಸೇರಿದೆ. ಇದೆಲ್ಲವೂ ಮಾರಾಟವಾಗಿದೆ. ಅಲ್ಲಿಂದ ಅದು ನಮಗೆ ಬಂದಿದೆ. ಕ್ರಯ ಪತ್ರದಲ್ಲಿ ಈ ಎಲ್ಲ ಭೂಮಿ ಕ್ರಯ ಆಗಿದೆ ಎಂದು ಸಚಿವರು ವಿವರಿಸಿದರು.
ಈಗ ಕೆರೆ ಒತ್ತುವರಿ ಆರೋಪ ಬಂದಿದೆ. ಈ ಊರಲ್ಲಿ ಎರಡು ಕೆರೆ ಇದೆ. ಆ ಎರಡೂ ಕೆರೆ ಅಸ್ತಿತ್ವದಲ್ಲಿ ಇವೆ. ಯಾರೂ ಬೇಕಾದರೂ ಪರಿಶೀಲಿಸಿ, ಈ ಕೆರೆಗಳಲ್ಲಿ ಒಂದೂ ಇಂಚು ಒತ್ತುವರಿ ಆಗಿದೆಯಾ ಎಂದು ಪರೀಕ್ಷಿಸಲಿ. ಬೇಕಾದರೆ ವಿಪಕ್ಷಗಳ ತಂಡ ಮಾಧ್ಯಮದವರ ಜೊತೆ ಬಂದು ತಾಪಸಣೆ ಮಾಡಲಿ ಎಂದು ಸವಾಲು ಹಾಕಿದರು.
ಈಗ ಸರ್ವೆ ನಂ.46, 47ರಲ್ಲಿ ಕೆರೆ ಒತ್ತುವರಿ ಆಗಿದೆ ಎಂದು ಆರೋಪ ಬಂದಿದೆ. ಆ ಜಮೀನಿನ ಬಗ್ಗೆ ನನಗೆ ಗೊತ್ತೇ ಇಲ್ಲ. ಇಲ್ಲಿವರೆಗೆ ಅದರ ಮಾಲಿಕತ್ವ ಹೊಂದಿದ್ದೇವೆ. ದಾಖಲೆಯಲ್ಲಿ ಏನಿದೆ ಎಂದು ಒಂದು ದಿನವೂ ನಾವು ನೋಡಲು ಹೋಗಿಲ್ಲ. ಕೆಲವರು ಬಹಳ ಸಂಶೋಧನೆ ಮಾಡಿದ್ದಾರೆ. ಹೀಗಾಗಿ ನಾನು ಆ ಜಮೀನು ಬಗ್ಗೆ ತಿಳಿಯಬೇಕಾಯಿತು ಎಂದು ತಿಳಿಸಿದರು.
ನನ್ನ ಕೆಲ ಕಠಿಣ ತೀರ್ಮಾನದಿಂದ ಬಾಧಿತರಾದವರು ಕೆಲ ಅಧಿಕಾರಿಗಳು ಇದ್ದಾರೆ. ಇದರಲ್ಲಿ ನಮ್ಮವರು ಇದ್ದಾರೆ. ಅವರು ಆಸಕ್ತಿ ತೋರಿ ಇದನ್ನು ಶೋಧ ಮಾಡಿದ್ದಾರೆ ಎಂದು ಅವರು ಹೇಳಿದರು.
ಈ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ನಮಗೆ ಅವರು ಯಾವುದೇ ದಾಖಲೆಗಳನ್ನು ಕೊಟ್ಟಿಲ್ಲ. ನಮ್ಮ ಬಳಿ ಇರುವ ದಾಖಲೆಗೂ ಅವರು ಹೇಳಿರುವುದಕ್ಕೂ ತಾಳೆನೇ ಆಗುತ್ತಿಲ್ಲ. ಹಾಗಾಗಿ ಸಾಕಷ್ಟು ಗೊಂದಲ ಇದೆ. ಕಂದಾಯ ಸಚಿವರಾಗಿ ಅವರು ತನಿಖೆ ಮಾಡಲಿ. ಸತ್ಯಾಸತ್ಯತೆ ಹೊರಬರಲಿ ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ಸರ್ವೆ ನಂ.48ರಲ್ಲಿ ಕೆರೆ ಇದೆ. ನಾವೇ ಹೂಳೆತ್ತಿ. ಕೆರೆ ಸಂರಕ್ಷಣೆ ಮಾಡಿ ಭದ್ರವಾಗಿ ಇಟ್ಟು ಕೊಂಡಿದ್ದೇವೆ. ಕೆರೆ ಸರಕಾರದ ಹೆಸರಲ್ಲಿ ಇದೆ. ಅದರಲ್ಲಿ ಯಾವುದೇ ಒತ್ತುವರಿ ಆಗಿಲ್ಲ. ಸರ್ವೆ ನಂ. 47ರಲ್ಲಿ ಪ್ರತಿ ಪುಸ್ತಕದಲ್ಲಿ 1 ಎಕರೆ ಸ್ಮಶಾನ ಎಂದು ಬಂದಿದೆ. ಅದನ್ನು ಬೇಕಾದರೆ ಬಿಟ್ಟು ಕೊಡಲು ಸಿದ್ಧ ಎಂದರು.
ಈ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಮಧ್ಯಪ್ರವೇಶಿಸಿ, ಸ್ಮಶಾನ ಬೇಕಾದರೆ ವಾಪಸು ಕೊಡುತ್ತೇನೆ ಅಂದರೆ ನೀವು ತಪ್ಪು ಮಾಡಿದ್ದೀರಿ ಎಂದು ಆಗುತ್ತೆ ಎಂದರು.
ಈ ವೇಳೆ ಎದ್ದು ನಿಂತ ಸಚಿವ ಭೈರತಿ ಸುರೇಶ್, ಅವರು ಸ್ಮಶಾನ ಜಾಗ ಬಿಟ್ಟು ಕೊಡಲು ಸಿದ್ಧರಿದ್ದಾರೆ ಎಂದ ಮೇಲೂ ಏನಿದೆ ಎಂದು ವಿಪಕ್ಷಗಳನ್ನು ಕೇಳಿದರು. ಅದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ಸ್ಪೀಕರ್ ಸದನವನ್ನು ಮುಂದೂಡಿದರು.







