ಬಸವ ಅಂತಾರಾಷ್ಟ್ರೀಯ ಮ್ಯೂಸಿಯಂಗೆ 64.43 ಕೋಟಿ ರೂ. ಬಿಡುಗಡೆ : ಸಚಿವ ಕೃಷ್ಣ ಬೈರೇಗೌಡ

ಬೆಳಗಾವಿ : ಬಸವ ಅಂತಾರಾಷ್ಟ್ರೀಯ ಮ್ಯೂಸಿಯಂಗೆ ಕೃಷ್ಣ ಜಲ ಭಾಗ್ಯ ನಿಗಮ ನಿಯಮಿತದಿಂದ ರೂ. 64.43 ಕೋಟಿ ಬಿಡುಗಡೆ ಮಾಡಲಾಗಿದ್ದು, ಇದುವರೆಗೂ ರೂ. 54.82 ಕೋಟಿ ಬಳಕೆ ಮಾಡಲಾಗಿದೆ ಎಂದು ಕಂದಾಯ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಅವರು ವಿಧಾನ ಪರಿಷತ್‍ನಲ್ಲಿ ಸದಸ್ಯ ನಿರಾಣಿ ಹನುಮಂತ ರುದ್ರಪ್ಪ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.
ಬಸವ ಅಂತಾರಾಷ್ಟ್ರೀಯ ಕೇಂದ್ರದ ಸಿವಿಲ್ ಕಾಮಗಾರಿಯ ಎ, ಬಿ, ಸಿ ಮತ್ತು ಎಫ್ ಬ್ಲಾಕ್‍ಗಳ ಕಾಮಗಾರಿ ಮುಕ್ತಾಯವಾಗಿದ್ದು, ಬಾಕಿ ಉಳಿದ ಡಿ ಮತ್ತು ಇ ಬ್ಲಾಕ್‍ಗಳ ಕಾಮಗಾರಿಗಳ ಆಡಳಿತಾತ್ಮಕ ಅನುಮೋದನೆ ನೀಡುವ ಪ್ರಸ್ತಾವನೆ ಪರಿಶೀಲನೆಯಲ್ಲಿರುತ್ತದೆ.
ಕಟ್ಟಡದ ಸಿವಿಲ್ ಕಾಮಗಾರಿಗಳು ಮುಕ್ತಾಯಗೊಂಡ ನಂತರ ಕಟ್ಟಡಗಳಲ್ಲಿ ಬಾಕಿ ಉಳಿದ ವಿದ್ಯುತ್, ಧ್ವನಿ ಮತ್ತು ಬೆಳಕು ಆಧುನಿಕ ಶೈಲಿಯ 3ಡಿ, ಡಯಾರಾಮ ಮಲ್ಟಿಮಿಡಿಯಾ ತಂತ್ರಜ್ಞಾನ ಮತ್ತು ಐನಿಮ್ಯಾಟ್ರಿಕ್ಸ್ ಇತ್ಯಾದಿ ಕಾಮಗಾರಿಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು.
ಈ ಮ್ಯೂಸಿಯಂ ನಿರ್ಮಾಣದ ಕಾಮಗಾರಿಗೆ ಸಂಬಂಧಿಸಿದಂತೆ ಬಸವ ಮ್ಯೂಸಿಯಂ ತಜ್ಞರ ಸಲಹಾ ಸಮಿತಿ ರಚಿಸಲಾಗಿದೆ. ಹಾಗೂ ಬಸವೇಶ್ವರ ಜೀವನ ದರ್ಶನ ಮತ್ತು ತತ್ವದರ್ಶನದೊಂದಿಗೆ ಅವರ ಚರಿತ್ರೆ ಬಾಲ್ಯ, ಯೌವನ ಮತ್ತು ಜೀವನಕ್ಕೆ ಸಂಬಂಧಿದಂತೆ, ಚಿತ್ರಕಲೆ, ಶಿಲ್ಪಕಲೆ ತ್ರಿಡಿ ತಂತ್ರಜ್ಞಾನ ಮತ್ತು ಡಯಾರಾಮ್ ಕೆಲಸ ಹಾಗೂ ವಚನಾಧಾರಿತ ವಿವರಗಳ ಮಾಹಿತಿಯನ್ನು ಡಿಜಿಟಲ್ ಹಾಗೂ ಮೂರ್ತಿಗಳ ಮುಖಾಂತರ ಪ್ರದರ್ಶಿಸಲು ವಿಸ್ತೃತ ಯೋಜನಾ ವರದಿ'ಯನ್ನು (DPR) ತಯಾರಿಸಲು ಪ್ರೊ. ಕೆ.ಬಿ ಗುಡಿಸಿ ಕುಲಪತಿಗಳು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚನೆ ಮಾಡಿ, ಪ್ರಥಮ ಹಂತದ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ.
ಅದರಂತೆ ಈ ಮ್ಯೂಜಿಯಂನ ವಿಸ್ತ್ರತ ಯೋಜನಾ ವರದಿಯನ್ನು ತಯಾರಿಸಲು ಒಟ್ಟು 21 ಸಭೆಗಳನ್ನು ನಡೆಸಲಾಗಿದೆ. ಈ ಸಭೆಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಸ್ತು ಸಂಗ್ರಹಾಲಯವನ್ನು ಹೇಗೆ ಮಾಡಬೇಕೆಂದು ಚರ್ಚಿಸಲಾಗಿದೆ.
12 ನೇ ಶತಮಾನದಲ್ಲಿ ಸಮಗ್ರ ಶರಣರ ಜೀವನ ಸಾಧನೆಗಳನ್ನು ಒಳಗೊಂಡಂತೆ, ಬಸವಣ್ಣನವರ ಸಂಪೂರ್ಣ ಜೀವನ ಚಿತ್ರಣವನ್ನು, ವಚನಾಧಾರಿತ ಚಿಂತನೆಗಳನ್ನು, ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ಅದರಲ್ಲಿ ಅಳವಡಿಸಬೇಕೆಂದು ತೀರ್ಮಾನಿಸಲಾಗಿದೆ. ಎಲ್ಲಾ ಚಿಂತನೆಗಳನ್ನು ಕನ್ನಡ, ಹಿಂದಿ, ಭಾಷೆಗಳಲ್ಲಿ ದೊರುಕುವಂತೆ ಮಾಡಬೇಕು ಎಂದು ನಿರ್ಣಯಿಸಲಾಗಿದ್ದು, ಸದರಿ ಸಭೆಯ ನಿರ್ಣಯದಂತೆ ಪ್ರಚಲಿತ ಕಾಮಗಾರಿಗಳು ಸಾಗುತ್ತಾ ಬಂದಿವೆ ಎಂದು ತಿಳಿಸಿದರು.







