10,651ಕ್ಕೂ ಹೆಚ್ಚು ಬಗರ್ ಹುಕುಂ ಜಮೀನು ಖಾತೆ ಬಾಕಿ : ಕಂದಾಯ ಸಚಿವ ಕೃಷ್ಣ ಭೈರೇಗೌಡ

ಬೆಳಗಾವಿ : ರಾಜ್ಯದಲ್ಲಿ ಬಗರ್ ಹುಕುಂ ಸಾಗುವಳಿ ಸಮಿತಿಗಳಲ್ಲಿ ನಿರ್ಣಯಿಸಿ ಅರ್ಹ ಫಲಾನುಭವಿಗಳಿಗೆ ಜಮೀನು ಮಂಜೂರು ಮಾಡಿರುವ 10,651 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಜಮೀನು ಖಾತೆ ಮಾಡುವುದು ಬಾಕಿಯಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ಬೆಳಗಾವಿ ಸುವರ್ಣ ಸೌಧದಲ್ಲಿ ಸೋಮವಾರ ಆರಂಭವಾದ ಚಳಿಗಾಲದ ಅಧಿವೇಶನದಲ್ಲಿ ಶಾಸಕರ ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಅವರು ಉತ್ತರಿಸಿ ಮಾತನಾಡಿದರು.
ಜಮೀನು ಖಾತೆ ಮಾಡದಿರಲು ಸುಮಾರು 20 ಅಂಶಗಳನ್ನು ಗುರುತಿಸಲಾಗಿದೆ. ಯಾವುದೇ ಅಡಚಣೆ ಇರದ ಪ್ರಕರಣಗಳಲ್ಲಿ ಶೀಘ್ರವೇ ಅರ್ಹ ಫಲಾನುಭವಿಗಳಿಗೆ ಖಾತೆ ಮಾಡಿಕೊಡಲಾಗುವುದು. ಹಲವು ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಯಾವುದೇ ಖಾತೆ ಮಾಡುವುದು ಬಾಕಿ ಇಲ್ಲ ಎಂದು ವರದಿ ನೀಡಿದ್ದಾರೆ. ಆದರೂ ಈ ವರದಿ ಅಂತಿಮವಲ್ಲ. ಜಮೀನು ಖಾತೆ ಪ್ರಕರಣಗಳ ಸಂಖ್ಯೆ ರಾಜ್ಯಾದ್ಯಂತ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇರಬಹುದು ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದರು.
ಈ ಸಂದರ್ಭದಲ್ಲಿ ಶಿರಾ ಶಾಸಕ ಟಿ.ಬಿ. ಜಯಚಂದ್ರ, ಶಿರಾ ತಾಲ್ಲೂಕಿನಲ್ಲಿ 2004ರಲ್ಲಿ ಮಂಜೂರು ಮಾಡಿದ ಜಮೀನುಗಳಿಗೂ ಕಂದಾಯ ಅಧಿಕಾರಿಗಳು ಖಾತೆ ಮಾಡಿಕೊಟ್ಟಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸರ್ಕಾರ ಕೂಡಲೇ ವಿಶೇಷ ಅಧಿಕಾರಿಯನ್ನು ನೇಮಿಸಿ, ತನಿಖೆ ನಡೆಸಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು, ಅಲ್ಲದೆ ರೈತರಿಗೆ ಮಂಜೂರಾದ ಜಮೀನಿನ ಹಕ್ಕು ಲಭಿಸುವಂತೆ ಮಾಡಬೇಕು ಎಂದು ಕಂದಾಯ ಸಚಿವರಲ್ಲಿ ಕೋರಿದರು. ಇದಕ್ಕೆ ಸಕಾರಾತ್ಮವಾಗಿ ಸ್ಪಂದಿಸಿ, ವಿಶೇಷ ಅಧಿಕಾರಿಯನ್ನು ನೇಮಿಸಿ, ಸಮಸ್ಯೆ ಪರಿಹರಿಸುವುದಾಗಿ ಸಚಿವ ಕೃಷ್ಣ ಭೈರೇಗೌಡ ಅವರು ಭರವಸೆ ನೀಡಿದರು.
ಗೋಮಾಳ ನಿಯಮ ಬದಲಾವಣೆ ಸಾಧ್ಯವಿಲ್ಲ:
ಸರ್ವೋಚ್ಛ ನ್ಯಾಯಾಲಯ 3 ಪ್ರಕರಣಗಳಲ್ಲಿ ಸ್ಪಷ್ಟವಾಗಿ ಗೋಮಾಳ ಜಮೀನನ್ನು ಇತರೆ ಉದ್ದೇಶಗಳಿಗೆ ಮಂಜೂರು ಮಾಡದಂತೆ ಆದೇಶ ಹೊರಡಿಸಿದೆ. 1991 ಭೂ ಸುಧಾರಣೆ ಕಾಯ್ದೆ ಅನುಸಾರ 100 ಜಾನುವಾರುಗಳಿಗೆ 30 ಎಕರೆ ಗೋಮಾಳ ಜಮೀನು ಕಾಯ್ದಿರಿಸುವ ನಿಯಮ ರೂಪಿಸಲಾಗಿದೆ. ಸದ್ಯ ಇವುಗಳ ಬದಲಾವಣೆ ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಸ್ಪಷ್ಟ ಪಡಿಸಿದರು.
ಶಾಸಕ ಧೀರಜ್ ಮುನಿರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.
ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಲು ನಮೂನೆ 50, 53, 57 ರಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲಾಗುತ್ತಿದೆ. ನಮೂನೆ 57ರ ಅಡಿ ಸಲ್ಲಿಕೆಯಾದ ಒಟ್ಟು 2.23 ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ರಾಜ್ಯಾದ್ಯಂತ ತಿರಸ್ಕೃತಗೊಳಿಸಲಾಗಿದೆ. ಒಂದು ವೇಳೆ ರೈತರು ಇದರಿಂದ ಬಾಧಿತರಾಗಿದ್ದರೆ, ಉಪವಿಭಾಗಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು. ಪ್ರಕರಣಗಳನ್ನು ಮರು ಪರಿಶೀಲಿಸುವಂತೆ ಉಪವಿಭಾಗಧಿಕಾರಿಗಳು ಸೂಚಿಸಿದರೆ, ಬಗರ್ ಹುಕುಂ ಸಮಿತಿಗಳಲ್ಲಿ ತಿರಸ್ಕೃತಗೊಂಡ ನಮೂನೆ 57ರ ಅರ್ಜಿಗಳನ್ನು ಪುನರ್ ಪರಿಶೀಲನೆಗೆ ಪರಿಗಣಿಸಲಾಗುವುದು ಎಂದು ತಿಳಿಸಿದರು.
ಜ.1ರಿಂದ ಭೂ ಮಂಜೂರಾತಿ ದಾಖಲೆಗಳ ಸ್ಕ್ಯಾನಿಂಗ್:
ಜ.1 ರಿಂದ ಎಲ್ಲ ತಾಲ್ಲೂಕು ಕಚೇರಿಗಳಲ್ಲಿ ಸರ್ಕಾರದಿಂದ ಮಂಜೂರು ಮಾಡಿರುವ ಭೂ ದಾಖಲೆಗಳು ಹಾಗೂ ಬಗರ್ ಹುಕಂ ಸಮಿತಿ ಸಭೆಯ ನಡಾವಳಿಗಳನ್ನು ಸ್ಕ್ಯಾನಿಂಗ್ ಮಾಡಿ ಡಿಜಿಟಲೀಕರಣ ಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಕಂದಾಯ ಕೃಷ್ಣಭೈರೇಗೌಡ ಸದನದಲ್ಲಿ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.







