ರಾಜ್ಯದಲ್ಲಿ ಬಿಯರ್ ಮಾರಾಟದಲ್ಲಿ ಕುಸಿತ : ಸಚಿವ ಆರ್.ಬಿ.ತಿಮ್ಮಾಪುರ

ಸಾಂದರ್ಭಿಕ ಚಿತ್ರ | PC : freepik
ಬೆಳಗಾವಿ : ರಾಜ್ಯದಲ್ಲಿ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಸೆಪ್ಟೆಂಬರ್ 2025 ಅಂತ್ಯದ ವರೆಗೆ 195.27 ಲಕ್ಷ ಪೆಟ್ಟಿಗೆ ಬಿಯರ್ ಮಾರಾಟ ಮಾಡಲಾಗಿದ್ದು, ಇದು ಕಳೆದ ಇದೇ ಅವಧಿಗೆ ಹೋಲಿಸಿದಲ್ಲಿ 47.46 ಲಕ್ಷ ಪೆಟ್ಟಿಗೆಗಳು ಕಡಿಮೆ ಮಾರಾಟವಾಗಿ ಶೇ.19.55 ಋಣತ್ಮಾಕ ಬೆಳವಣಿಗೆಯಾಗಿರುತ್ತದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದ್ದಾರೆ.
ಸೋಮವಾರ ಪರಿಷತ್ ನಲ್ಲಿ, ರಾಜ್ಯದಲ್ಲಿ ಮದ್ಯಪಾನ ಸೇವನೆ ಮಾಡುತ್ತಿರುವವರು ಲಿವರ್ ಸಿರೋಸಿಸ್/ಜಾಂಡೀಸ್ ಎಂಬ ಪಿತ್ತಕೋಶ ಖಾಯಿಲೆಯಿಂದ ಬಳಲುತ್ತಿದ್ದು, ಅವರುಗಳ ಉತ್ತಮ ಚಿಕಿತ್ಸೆಗಾಗಿ ಅಬಕಾರಿ ಇಲಾಖೆಯ ಆದಾಯದ ಕನಿಷ್ಠ ಶೇ.20ರಷ್ಟು ಮೊತ್ತವನ್ನು ವಿನಿಯೋಗಿಸುವ ಕುರಿತ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಮತ್ತು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ನಿಯಮ 330ರ ವಿಷಯಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಸಾಲಿನಲ್ಲಿ ಬಿಯರ್ ಮಾರಾಟವು ಕಡಿಮೆ ಮಾರಾಟವಾಗುತ್ತಿದ್ದು, ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗಿದ್ದು, ಅಲ್ಲದೇ ಶೀತ ವಾತಾವರಣ ಇರುವುದರಿಂದ ಬಿಯರ್ ಮಾರಾಟದಲ್ಲಿ ಕುಸಿತ ಉಂಟಾಗಿರುವುದಕ್ಕೆ ಪ್ರಮುಖ ಕಾರಣವಾಗಿರುತ್ತದೆ. ಅಬಕಾರಿ ಇಲಾಖೆಯಿಂದ ಸಂಗ್ರಹವಾಗುವ ಅಬಕಾರಿ ಆದಾಯವನ್ನು ರಾಜ್ಯದ ಸಂಚಿತ ನಿಧಿಗೆ ಜಮೆಗೊಳಿಸಿ ಆಯವ್ಯದಲ್ಲಿ ಅನುಮೋದಿಸಿಲ್ಪಟಿರುವ ಕಾರ್ಯಕ್ರಮಗಳಿಗೆ ವೆಚ್ಚಗೊಳಿಸುತ್ತಿದೆ. ಯಾವುದಾದರೂ ಒಂದು ಇಲಾಖೆಯಿಂದ ಸಂಚಿತ ನಿಧಿಗೆ ಜಮೆಯಾಗಿರುವ ಅನುದಾನವನ್ನು ಯಾವುದೇ ಒಂದು ಉದ್ದೇಶಕ್ಕಾಗಿ ವೆಚ್ಚಗೊಳಿಸುವ ಪದ್ದತಿಯನ್ನು ಜಾರಿಯಲ್ಲಿರುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದ ಜನರ ಸರ್ವಾಂಗೀಣ ಆರೋಗ್ಯ ಮತ್ತು ಚಿಕಿತ್ಸೆಗಾಗಿ ರಾಜ್ಯ ಸrkaರದಿಂದ ಹಲವಾರು ಉಪ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸrkaರಗಳ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಮತ್ತು ನ್ಯಾಷನಲ್ ಹೆಲ್ತ್ ಮಿಷನ್ ಮುಂತಾದ ಯೋಜನೆಗಳಡಿ ರಾಜ್ಯದ ಸಾರ್ವಜನಿಕರಿಗೆ ಸಾರ್ವಜನಿಕ ಆರೋಗ್ಯ ಕೇಂದ್ರಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಮೂಲಕ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇದಕ್ಕಾಗಿ ಆಯವ್ಯಯದಲ್ಲಿ ಅಗತ್ಯ ಅನುದಾನವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳ ಬೇಡಿಕೆಯಡಿ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ವಿಚಾರಕ್ಕೆ ಆಕ್ಷೇಪಿಸಿ ಮಾತನಾಡಿದ ಎನ್.ರವಿಕುಮಾರ್ ಸಹಿತ ವಿಪಕ್ಷ ಸದಸ್ಯರು, ರಾಜ್ಯದಲ್ಲಿ ಕಳಪೆ ಮದ್ಯ ಮಾರಾಟ ಹಾಗೂ ಹೊಸ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು, ಪ್ರತಿ ಜಿಲ್ಲೆಯಲ್ಲಿ ಗ್ಯಾಸ್ಟ್ರೋ ಎಂಟರೋಲೋಜಿಸ್ಟ್ ವೈದ್ಯರನ್ನು ನೇಮಿಸಬೇಕೆಂದು ಆಗ್ರಹಿಸಿದರು.







