'ಶಿವಾಜಿ ಮಹಾರಾಜರು ಮುಸ್ಲಿಮರ ವಿರೋಧಿಯಲ್ಲ; ಸುಳ್ಳು ಹೇಳಬಾರದು' : ವೇದಿಕೆಯಲ್ಲಿಯೇ ಯತ್ನಾಳ್‌ಗೆ ಸಚಿವ ಸಂತೋಷ್ ಲಾಡ್ ತಿರುಗೇಟು

ಬೆಳಗಾವಿ : ಶಿವಾಜಿ ಮಹಾರಾಜರನ್ನು ಯಾರೂ ಮುಸ್ಲಿಮ್ ವಿರೋಧಿ ಎಂದು ಹೇಳಬಾರದು. ಇಲ್ಲಿ ಯಾರೂ ಇತಿಹಾಸದ ಬಗ್ಗೆ ಸುಳ್ಳು ಹೇಳಬಾರದು ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಕಾರ್ಯಕ್ರಮದ ವೇದಿಕೆಯಲ್ಲಿಯೇ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿರುಗೇಟು ನೀಡಿದ ಪ್ರಸಂಗ ಜರುಗಿತು.
ರವಿವಾರ ಶಿವಾಜಿ ವೃತ್ತದಲ್ಲಿ ಶಿವಪ್ರತಿಷ್ಠಾನ ಹಿಂದೂಸ್ತಾನ ಘಟಕ ಅಥಣಿ ಹಾಗೂ ಅಥಣಿ ತಾಲೂಕು 'ಏಕಛತ್ರ ಮರಾಠ ಸಮಾಜ ಸಂಘ'ದ ಸಂಯುಕ್ತಾಶ್ರಯದಲ್ಲಿ ನಡೆದ ನಡೆದ ಧ್ವಜಸ್ತಂಭ ಪೂಜೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆ ಲೋಕಾರ್ಪಣೆಗೊಳಿಸಿ, ಬಳಿಕ ಭೋಜರಾಜ ಮೈದಾನದಲ್ಲಿನಡೆದ ಸಾರ್ವಜನಿಕ ಸಮಾವೇಶಯನ್ನುದ್ದೇಶಿಸಿ ಸಚಿವರು ಮಾತನಾಡಿದರು.
ವಾಸ್ತವದಲ್ಲಿ ನಾವು ಮೊಘಲರ ವಿರುದ್ಧ ಇದ್ದೆವು. ಆದರೆ ಮುಸ್ಲಿಮರ ವಿರೋಧಿಗಳಾಗಿರಲಿಲ್ಲ ಎಂದು ಅವರು ತಿಳಿಸಿದರು.
ಅಲ್ಲದೆ, ಶಿವಾಜಿ ಮಹಾರಾಜರನ್ನು ಯಾರೂ ಮುಸ್ಲಿಮ್ ವಿರೋಧಿ ಎಂದು ಹೇಳಬಾರದು. ಇಲ್ಲಿ ಯಾರೂ ಇತಿಹಾಸದ ಬಗ್ಗೆ ಸುಳ್ಳು ಹೇಳಬಾರದು ಎಂದು ಸಚಿವರು ಹೇಳಿದರು.
ಇದಕ್ಕೂ ಮೊದಲು ವೇದಿಕೆಯಲ್ಲಿ ಮಾತನಾಡಿದ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಿವಾಜಿ ಮಹಾರಾಜರು ಅಂದಿನ ಕಾಲದಲ್ಲಿ ಹಿಂದೂ ಸಮಾಜ ರಕ್ಷಣೆ ಮಾಡದೆ ಹೋಗಿದ್ದರೆ ಇಂದು ನಾವೆಲ್ಲರೂ ಅನಿವಾರ್ಯವಾಗಿ ಬೇರೆ ಧರ್ಮ ಅನುಸರಿಸಬೇಕಾಗಿತ್ತು ಎಂದಿದ್ದರು.
ಟಿಕೆಟ್ ಕೊಡಲ್ಲ ಯಾಕೆ?
ಎಲ್ಲರೂ ಮರಾಠರ ಬಗ್ಗೆ ಮಾತನಾಡುತ್ತಾರೆ. ಆದರೆ ಯಾರೂ ಗ್ರಾಮ ಪಂಚಾಯಿತಿಯಿಂದ ಹಿಡಿದು ಬೇರೆ ಯಾವುದೇ ಸ್ಥಾನಕ್ಕೆ ಟಿಕೆಟ್ ಕೊಡುವುದಿಲ್ಲ ಎಂದು ಸಂತೋಷ್ ಲಾಡ್ ಅಸಮಾಧಾನ ಹೊರಹಾಕಿದರು.







