ಶಿವಂ ಅಸೋಸಿಯೇಟ್ಸ್ ಬಹುಕೋಟಿ ವಂಚನೆ ಪ್ರಕರಣ ಸಿಐಡಿಗೆ: ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ : ಬಹುಕೋಟಿ ರೂ. ವಂಚನೆ ಆರೋಪ ಎದುರಿಸುತ್ತಿರುವ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ್ ಪ್ರಕರಣವನ್ನು ಸರಕಾರ ಅಧಿಕೃತವಾಗಿ ಸಿಐಡಿ ತನಿಖೆಗೆ ವಹಿಸಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಪ್ರಕರಣದ ತನಿಖೆಯನ್ನು ಈಗಾಗಲೇ ಸಿಐಡಿಗೆ ಒಪ್ಪಿಸಲಾಗಿದೆ. ಸಿಐಡಿ ಅಧಿಕಾರಿಗಳು ಸಮಗ್ರ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಿದ ನಂತರವೇ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹಾಗೂ ನಿಖರ ಮಾಹಿತಿ ಬಹಿರಂಗವಾಗಲಿದೆ” ಎಂದು ಹೇಳಿದರು.
ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಇದು ಸಂಪೂರ್ಣವಾಗಿ ಸಾರ್ವಜನಿಕರ ಹಣಕಾಸು ವಂಚನೆಗೆ ಸಂಬಂಧಿಸಿದ ಪ್ರಕರಣವಾಗಿದೆ. ಕಾನೂನು ಬಾಹಿರವಾಗಿ ಹಣ ಸಂಗ್ರಹಿಸಿ ಸಾರ್ವಜನಿಕರಿಗೆ ಮೋಸ ಮಾಡಿರುವ ಆರೋಪದ ಹಿನ್ನೆಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಅಥವಾ ಪ್ರೇರೇಪಣೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಹೆಚ್ಚಿನ ಬಡ್ಡಿಯ ಆಮಿಷಕ್ಕೆ ಒಳಗಾಗಿ ಸಾರ್ವಜನಿಕರು ಕಷ್ಟಪಟ್ಟು ದುಡಿದ ಹಣವನ್ನು ಅನಧಿಕೃತ ಸಂಸ್ಥೆಗಳಲ್ಲಿ ಹೂಡಿಕೆ ಮಾಡಬಾರದು ಎಂದು ಸಚಿವರು ಮನವಿ ಮಾಡಿದರು.
“ಯಾವುದೇ ಸಂಸ್ಥೆಗಳು ನಿಯಮಬಾಹಿರವಾಗಿ ಅತಿಯಾದ ಲಾಭದ ಭರವಸೆ ನೀಡಿದಾಗ ಸಾರ್ವಜನಿಕರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಇಂತಹ ವಂಚನೆಗಳನ್ನು ತಡೆಯಲು ಕಾನೂನು ಕ್ರಮದ ಜೊತೆಗೆ ಜನಜಾಗೃತಿಯೂ ಅತ್ಯಂತ ಮುಖ್ಯವಾಗಿದೆ” ಎಂದು ಹೇಳಿದರು.
ಇತ್ತೀಚೆಗೆ ರಾಜ್ಯ ಸರಕಾರ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಅವರನ್ನು ಬೆಳಗಾವಿಗೆ ವರ್ಗಾವಣೆ ಮಾಡಿದ್ದು, ಅವರು ಬೆಳಗಾವಿ ಉತ್ತರ ವಲಯದ ನೂತನ ಪೊಲೀಸ್ ಮಹಾನಿರೀಕ್ಷಕರಾಗಿ ಶೀಘ್ರದಲ್ಲೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು.
ಇಂಧನ ದರ ಏರಿಕೆಗೆ ಆಕ್ರೋಶ
ಗ್ಯಾಸ್, ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಚುನಾವಣೆಗಳು ಮುಗಿದ ತಕ್ಷಣ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸುವುದು ಹೊಸದೇನಲ್ಲ, ಇದು ಅವರ ಹಳೆಯ ಚಾಳಿಯಾಗಿದೆ ಎಂದು ಟೀಕಿಸಿದರು.






