ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಕುರಿತ ಯತೀಂದ್ರ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು ಹೀಗೆ...

ಬೆಳಗಾವಿ : ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಕುರಿತ ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರು, ʼʼಸಿಎಂ ಆಯ್ಕೆ ಕುರಿತು ಪಕ್ಷ ತೀರ್ಮಾನ ಮಾಡಬೇಕು. ಇನ್ನು ಯತೀಂದ್ರ ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದಾರೆʼʼ ಎಂದು ಹೇಳಿದರು.
ಬೆಳಗಾವಿ ತಾಲ್ಲೂಕಿನ ಕಾಕತಿಯಲ್ಲಿ ಕಾಕತಿ ಉತ್ಸವದ ಮೆರವಣಿಗೆಗೆ ಚಾಲನೆ ನೀಡಿ ಮಾಧ್ಯಮಗಳ ಜೊತೆಗೆ ಅವರು ಮಾತನಾಡಿದರು.
ನಾವು 2028ಕ್ಕೆ ಸಿಎಂ ಕ್ಲೈಮ್ ಮಾಡುತ್ತೇವೆ ಎಂದು ಈ ಮುಂಚೆಯೇ ಹೇಳಿದ್ದೇವೆ. ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಅಂತಿಮವಾಗಿ ಯಾರು ನಾಯಕತ್ವ ವಹಿಸಿಕೊಳ್ಳಬೇಕು ಎಂದು ಪಕ್ಷ, ಶಾಸಕರು ನಿರ್ಧಾರ ಮಾಡಬೇಕು. ಎಲ್ಲರನ್ನೂ ಜೊತೆಗೆ ಒಯ್ಯುವ ಪ್ರಯತ್ನ ಮಾಡುತ್ತಿದ್ದೇವೆ. ಅಂತಿಮವಾಗಿ ಪಕ್ಷವೇ ನಿರ್ಧಾರ ಮಾಡಬೇಕು ಎಂದರು.
ಅಹಿಂದ ನಾಯಕತ್ವ ಇದ್ದೇ ಇದೆ. ಅದರಲ್ಲಿ ಯಾವುದೇ ಪ್ರಶ್ನೆ ಇಲ್ಲ. ಹಿಂದೆಯೂ ಇದೆ. ಇವತ್ತೂ ಇದೆ. ನಾಳೆಯೂ ಕೂಡ ಇದ್ದೇ ಇರುತ್ತದೆ. ಅಹಿಂದ ನಾಯಕತ್ವ ಇಲ್ಲದೇ ರಾಜಕಾರಣ ಮಾಡಲು ಆಗುವುದಿಲ್ಲ. ಎಲ್ಲವನ್ನೂ ಇವತ್ತೇ ಜೋಡಿಸಲು ಆಗಲ್ಲ. ಅದಕ್ಕಾಗಿ ಕಾಯಬೇಕಾಗುತ್ತದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಸಿದ್ದರಾಮಯ್ಯ ಅವರು ಇದರಲ್ಲಿ ಪ್ರಮುಖ ಮಾತ್ರ ವಹಿಸಬೇಕಾಗುತ್ತದೆ ಎಂಬುದಕ್ಕೆ ಎಲ್ಲವನ್ನೂ ಇಂದು ಕಾಕತಿಯಲ್ಲಿ ತೀರ್ಮಾನಿಸಲು ಆಗಲ್ಲ. ಇನ್ನೂ 30 ತಿಂಗಳು ಇದೆ. ನಂತರ ಏನೇನು ಬೆಳವಣಿಗೆ ಆಗುತ್ತದೆ. ಪಕ್ಷ, ಶಾಸಕರು, ಆಗಿನ ವಾತಾವರಣದ ಮೇಲೆ ನಿರ್ಧಾರ ಆಗುತ್ತದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಪುತ್ರ ಹೇಳಿಕೆ ನೀಡಿದ್ದಕ್ಕೆ ಅಷ್ಟು ಮಹತ್ವ ಪಡೆದುಕೊಂಡಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ನಾನು ಈಗಾಗಲೇ ಹೇಳಿದ್ದೇನೆ. ಎಲ್ಲರಿಗೂ ತಮ್ಮ ಅಭಿಪ್ರಾಯ ತಿಳಿಸಲು ಅಧಿಕಾರವಿದೆ. ಹಾಗಾಗಿ, ಅವರು ಹೇಳಿದ್ದಾರೆ ಅಷ್ಟೇ. ಮಂದೆ ಏನಾಗುತ್ತದೆ ಎಂದು ನೋಡೋಣ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಿ ತಾವು ಅಧಿಕಾರ ವಹಿಸಿಕೊಳ್ಳುತ್ತಿರಿ ಎಂದು ಚರ್ಚೆ ಆಗುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ನನಗೆ ಗೊತ್ತೇ ಇಲ್ಲ ಎಂದಷ್ಟೇ ಹೇಳಿದರು.







