ಬೆಳಗಾವಿ | ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಹೃದಯಾಘಾತದಿಂದ ಅಭಿಮಾನಿ ಮೃತ್ಯು

ಬೆಂಗಳೂರು : ಸಂಘಟಿತ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ ಅಂತರದಿಂದ ರೋಚಕವಾಗಿ ಮಣಿಸಿತು. ಈ ಮೂಲಕ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಆರ್‌ಸಿಬಿ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಫೈನಲ್ ಮ್ಯಾಚ್ ಮುಗಿದ ಬಳಿಕ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ಸಂಭ್ರಮಾಚರಣೆ ಮಾಡುವಾಗಲೇ ಈ ದುರಂತ ಸಂಭವಿಸಿದೆ. ಆರ್‌ಸಿಬಿ ಅಭಿಮಾನಿ ಮಂಜುನಾಥ್ ಈರಪ್ಪ ಕುಂಬಾರ (25) ಮೃತಪಟ್ಟವರು.
ಅವರಾದಿ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಕುಣಿಯುತ್ತಲೇ ಅವರು ಕುಸಿದು ಬಿದ್ದರು. ಕೂಡಲೇ ಗೆಳೆಯರೆಲ್ಲಾ ಸೇರಿ ಸಮೀಪದ ಮಹಾಲಿಂಗಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರೊಳಗೆ ಮಂಜುನಾಥ್ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.





