ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸಚಿವ ಕೃಷ್ಣ ಬೈರೇಗೌಡ ಸೂಚನೆ

ಬೆಳಗಾವಿ : ಪ್ರವಾಹ ಪರಿಸ್ಥಿತಿ ಸಮರ್ಪಕವಾಗಿ ನಿರ್ವಹಿಸಲು ಗ್ರಾ.ಪಂ.ಗಳಲ್ಲಿ ರಚಿಸಲಾದ ಟಾಸ್ಕ್ ಫೋರ್ಸ್‍ಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದಲ್ಲಿ ಪ್ರವಾಹದಿಂದ ಆಗಬಹುದಾದ ಸಂಭವನೀಯ ಹಾನಿ ತಡೆಗಟ್ಟಬಹುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಂದಿಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಪ್ರಸಕ್ತ ಸಾಲಿನಲ್ಲಿ ಮುಂಗಾರು ಪ್ರಾರಂಭವಾಗಿದ್ದು ವಾಡಿಕೆಗಿಂತ ಹೆಚ್ಚಿನ ಮಳೆ ಆಗುತ್ತಿದೆ. ಮಳೆಯಿಂದಾಗಿ ಸಂಭವನೀಯ ಪ್ರವಾಹಕ್ಕೆ ಒಳಗಾಗಬಹುದಾದ ಗ್ರಾಮಗಳಲ್ಲಿನ ಜನ ಜಾನುವಾರುಗಳನ್ನು ಸ್ಥಳಾಂತರಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಸಾರ್ವಜನಿಕೆಗೆ ತೊಂದರೆಯಾದರೆ ಪರಿಹಾರ ವಿತರಿಸಿ, ಬರುವುದು ಅಧಿಕಾರಿಗಳ ಕೆಲಸವಲ್ಲ. ತೊಂದರೆಯಾಗುವ ಮುಂಚೆಯೇ ಸಾರ್ವಜನಿಕರಿಗೆ ತಿಳಿಹೇಳಿ ಅನಾಹುತಗಳನ್ನು ತಪ್ಪಿಸಬೇಕು. ಹಾನಿಗಳನ್ನು ತಡೆಗಟ್ಟಲು ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಪಂಚಾಯತಿ ಮಟ್ಟದಲ್ಲಿ ಪಿಡಿಓ ಸೇರಿದಂತೆ ಎಲ್ಲ ಸಿಬ್ಬಂದಿಗಳನ್ನು ಪ್ರವಾಹ ನಿರ್ವಹಣೆಗೆ ಶ್ರಮಿಸಬೇಕು ಎಂದರು.
ಶಿಥಿಲಾವಸ್ಥೆಯಲ್ಲಿ ಇರುವಂತಹ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ ತರಗತಿಗಳನ್ನು ನಡೆಸದಂತೆ ನಿಗಾವಹಿಸಬೇಕು. ಮಳೆಯಿಂದಾಗಿ ಹಾನಿಗೊಳಗಾದ ಮನೆಗಳ ಪರಿಹಾರವನ್ನು ಮಾರ್ಗಸೂಚಿಗಳನ್ವಯ ವಿತರಿಸಬೇಕು. ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ನೀರಿಕ್ಷಕರು ತಮ್ಮ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಮನೆ, ಶಾಲಾ ಹಾಗೂ ಅಂಗನವಾಡಿ ಕಟ್ಟಡಗಳನ್ನು ಗುರುತಿಸಿ ಅವುಗಳ ಬಳಕೆ ನಿಷೇಧಿಸಬೇಕು ಎಂದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿನ ನದಿಗಳ ಒಳಹರಿವು ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಲಾಗುತ್ತಿದೆ. ಅಪಾಯ ಮಟ್ಟ ಮೀರಿ ಹರಿಯುವಂತಹ ನದಿ, ಹಳ್ಳ, ಸೆರತುವೆಗಳ ಹತ್ತಿರ ಜನ-ಜಾನುವಾರುಗಳ ಸಂಚಾರ ನಿರ್ಬಂಧಿಸಿ ಪ್ರದರ್ಶನ ಫಲಕಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ ಎಂದರು.
ಜಿ.ಪಂ. ಸಿಇಓ ರಾಹುಲ ಶಿಂಧೆ ಮಾತನಾಡಿ, ಅತಿವೃಷ್ಠಿಯಿಂದ ಹಾನಿಗೊಳಗಾಬಹುದಾದ ಗ್ರಾಮಗಳಲ್ಲಿ ಸಂಭವನೀಯ ಹಾನಿ ತಪ್ಪಿಸಲು ಈಗಾಗಲೇ ಪಂಚಾಯತಿಗಳೊಂದಿಗೆ ಸಭೆ ನಡೆಸಿ ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ. ಶಿಥಿಲಾವಸ್ಥೆಯಲ್ಲಿ ಇರುವಂತಹ ಅಂಗನವಾಡಿ ಹಾಗೂ ಶಾಲಾ ಕಟ್ಟಡಗಳಲ್ಲಿ ತರಗತಿಗಳನ್ನು ನಡೆಸದಂತೆ ಸೂಚನೆ ನೀಡಲಾಗಿದೆ ಎಂದರು.
ಪರಿಷತ್ ಸದಸ್ಯರಾದ ನಾಗರಾಜ ಯಾದವ್, ಕಂದಾಯ ಇಲಾಖೆ ಆಯುಕ್ತ ಪಿ.ಸುನೀಲಕುಮಾರ, ಐಎಎಸ್ ಅಧಿಕಾರಿ ಅಭಿನವ ಜೈನ್, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು, ಕಂದಾಯ ಇಲಾಖೆ ಸಿಬ್ಬಂದಿಗಳು ಸಭೆಯಲ್ಲಿ ಹಾಜರಿದ್ದರು.







