ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ದುರ್ಬಳಕೆಯಾಗಿಲ್ಲ: ಡಾ.ಮಹದೇವಪ್ಪ ಸ್ಪಷ್ಟನೆ

ಬೆಳಗಾವಿ(ಸುವರ್ಣವಿಧಾನಸೌಧ), ಡಿ.12: ಗ್ಯಾರಂಟಿ ಯೋಜನೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಫಲಾನುಭವಿಗಳ ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಅನುದಾನವನ್ನು ಬಳಕೆ ಮಾಡಿದ್ದು, ಹಣ ದುರ್ಬಳಕೆಯಾಗಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಸದನಕ್ಕೆ ಸ್ಪಷ್ಟನೆ ಕೊಟ್ಟರು.
ಶುಕ್ರವಾರ ವಿಧಾನ ಪರಿಷತ್ ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಬಿಜೆಪಿ ಸದಸ್ಯೆ ಹೇಮಲತಾ ನಾಯಕ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಕಾಯ್ದೆಯ ಸೆಕ್ಷನ್ 7(ಸಿ) ರಡಿ ಸಾಮಾನ್ಯ ಸಾಮಾಜಿಕ ವಲಯದ ಕಾರ್ಯಕ್ರಮಗಳ ಫಲಾನುಭವಿಗಳ ಜನಸಂಖ್ಯೆಯ ಪ್ರಮಾಣಕ್ಕನುಗುಣವಾಗಿ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಅಡಿಯಲ್ಲಿ ಅನುದಾನವನ್ನು ಹಂಚಿಕೆ ಮಾಡಿ ಉಪಯೋಗಿಸಲು ಅವಕಾಶವಿರುತ್ತದೆ. ಅದರಂತೆ, ಗ್ಯಾರಂಟಿ ಯೋಜನೆಗಳಿಗೆ ಈ ಕಾಯ್ದೆಯ ಅಡಿಯಲ್ಲಿ ಅನುದಾನ ಹಂಚಿಕೆ ಮಾಡಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಫಲಾನುಭವಿಗಳಿಗೆ ಉಪಯೋಗಿಸಲಾಗುತ್ತಿದೆ ಎಂದರು.
ಪ್ರಾರಂಭದಿಂದಲೂ ಈ ಕಾಯ್ದೆಯ ಸೆಕ್ಷನ್ 7(ಸಿ) ಪ್ರಕಾರ ಶಿಕ್ಷಣ, ಆರೋಗ್ಯ, ಕೃಷಿ, ತೋಟಗಾರಿಕೆ, ನೀರಾವರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಯೋಜನಾ ಇಲಾಖೆ, ಇಂಧನ ಇತ್ಯಾದಿ ಇಲಾಖೆಗಳಲ್ಲಿ ಎಲ್ಲರಿಗೂ ಅನ್ವಯವಾಗುವ ಯೋಜನೆಗಳು ಜಾರಿಯಲ್ಲಿದ್ದು, ಈ ಯೋಜನೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳ ಸಮಗ್ರ ಅಭಿವೃದ್ಧಿಗಾಗಿ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಅಡಿಯಲ್ಲಿ ಅನುದಾನವನ್ನು ಹಂಚಿಕೆ ಮಾಡಿ ಉಪಯೋಗಿಸಲಾಗುತ್ತಿದೆ ಎಂದು ಎಚ್.ಸಿ.ಮಹಾದೇವಪ್ಪ ಸ್ಪಷ್ಟಪಡಿಸಿದರು.
ಮೇಲ್ಮನೆಯಲ್ಲಿ ಕಾವೇರಿದ ವಾಕ್ಸಮರ :
ಇದೇ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ 50 ಸಾವಿರ ಕೋಟಿ ಅನುದಾನ ದುರುಪಯೋಗವಾಗಿದೆ. ಈ ಪ್ರಕರಣವನ್ನು ಎಸ್ಐಟಿ ರಚನೆ ಮಾಡಿ ತನಿಖೆಗೆ ಆದೇಶ ನೀಡಬೇಕು ಎಂದು ಸರಕಾರದ ವಿರುದ್ಧ ಪ್ರತಿಪಕ್ಷದ ಸದಸ್ಯರು ಗಂಭೀರ ಆರೋಪ ಮಾಡಿದ ಪ್ರಸಂಗ ನಡೆಯಿತು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಭಾರೀ ಮಾತಿನ ಚಕಮಕಿ ನಡೆದು ಸದನದಲ್ಲಿ ಒಂದು ಕ್ಷಣ ಕಾವೇರಿದ ವಾಕ್ಸಮರವೂ ಉಂಟಾಯಿತು.
ಪ್ರತಿಪಕ್ಷ ಸದಸ್ಯರು ಈ ಆರೋಪ ಮಾಡುತ್ತಿದ್ದಂತೆ ಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸದಸ್ಯರಾದ ಎನ್.ರವಿಕುಮಾರ್, ಪೂಜಾರ್, ಹೇಮಲತಾ ನಾಯಕ ಮತ್ತಿತರರು ಮಾತನಾಡಿ, ಇದು ಗಂಭೀರವಾದ ಆರೋಪ. ಸರಕಾರದ ಮೇಲೆಯೇ ಇಷ್ಟು ದೊಡ್ಡ ಮೊತ್ತದ ಭ್ರಷ್ಟಾಚಾರದ ಆರೋಪವಿದೆ. ತಕ್ಷಣವೇ ಇದನ್ನು ತನಿಖೆಗೆ ವಹಿಸಿ ಎಂದು ಒತ್ತಾಯಿಸಿದರು.







