ಹಾವೇರಿಯ 9 ಗ್ರಾಮಗಳಲ್ಲಿ ನೀರಿನಲ್ಲಿ ಪ್ಲೋರೈಡ್ ಅಂಶ ಪತ್ತೆ : ಪ್ರಿಯಾಂಕ್ ಖರ್ಗೆ

ಬೆಳಗಾವಿ : ಹಾವೇರಿ ಜಿಲ್ಲಾ ವ್ಯಾಪ್ತಿಯ 9 ಗ್ರಾಮಗಳಲ್ಲಿ ಪ್ರಮಾಣಕ್ಕಿಂತ ಹೆಚ್ಚಾಗಿ ನೀರಿನಲ್ಲಿ ಪ್ಲೋರೈಡ್ ಅಂಶವು ಪತ್ತೆಯಾಗಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ಬಣಕಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಾವೇರಿಯ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಬರುವ 685 ಗ್ರಾಮಗಳ ಕುಡಿಯುವ ನೀರಿನ ಗುಣಮಟ್ಟದ ಪರಿಶೀಲನೆ ನಡೆಸಲಾಗಿದೆ. ಈ ಪೈಕಿ ಹಾವೇರಿ ತಾಲೂಕಿನ ಬೆಳವಿಗಿ, ಮರಡೂರ, ತೆರೆದಹಳ್ಳಿ, ಗುಯಿಲಗುಂದಿ, ಮೇವುಂಡಿ, ಗೂಡೂರು, ಮರೋಳ, ದೇವಗಿರಿ ಹಾಗೂ ಶಿಗ್ಗಾಂವ್ ತಾಲ್ಲೂಕಿನ ಕಂಕಣವಾಡ ಗ್ರಾಮಗಳ ಮಾದರಿಯಲ್ಲಿ ಪ್ಲೋರೈಡ್ ಅಂಶ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಮೂಲಕ ಮೇಲ್ಮೈ ನೀರನ್ನು ಒದಗಿಸಲಾಗುತ್ತಿದೆ ಎಂದರು.
ಜತೆಗೆ, ಈ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದೆ. ಕಂಕಣವಾಡಿ ಗ್ರಾಮದಲ್ಲಿ ಪರ್ಯಾಯ ಕೊಳವೆ ಬಾವಿ ನೀರು ಮತ್ತು ಪಕ್ಕದ ಹನುಮರಹಳ್ಳಿ ಶುದ್ದ ಕುಡಿಯುವ ನೀರಿನ ಘಟಕದಿಂದ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಎಲ್ಲ ಜಿಲ್ಲಾ ಪಂಚಾಯಿತಿಗಳಲ್ಲಿ ಪ್ರತಿ ತಿಂಗಳು ನೀರಿನ ಗುಣಮಟ್ಟ ಪರೀಕ್ಷೆ ನಡೆಸಲಾಗುತ್ತಿದೆ. ಇದಕ್ಕಾಗಿ ಪ್ರಯೋಗಾಲಯಗಳನ್ನು ತೆರೆಯಲಾಗಿದೆ. ಸುಮಾರು 6.50 ಲಕ್ಷ ನೀರಿನ ಮಾದರಿಗಳನ್ನು ರಾಜ್ಯಾದ್ಯಂತ ಪರೀಕ್ಷಿಸಲಾಗಿದೆ. ಗ್ರಾಮಗಳಿಗೆ ನೀರು ಪರೀಕ್ಷಾ ಕಿಟ್ ಒದಗಿಸಲಾಗಿದೆ ಎಂದು ಅವರು ವಿವರಿಸಿದರು.
ಈ ವೇಳೆ ಸದಸ್ಯರಾದ ಎಸ್.ಆರ್.ಶ್ರೀನಿವಾಸ್, ಡಾ.ಚಂದ್ರು ಲಮಾಣಿ ಸೇರಿದಂತೆ ಪ್ರಮುಖರು ಕೆಟ್ಟು ನಿಂತು ಹೋದ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಗ್ರಾಮ ಪಂಚಾಯಿತಿಗಳಿಗೆ ಅನುದಾನ ನೀಡುವಂತೆ ಸಚಿವರಲ್ಲಿ ಕೋರಿದರು.
ಇದಕ್ಕೆ ಉತ್ತರಿಸಿದ ಸಚಿವರು, ಗ್ರಾಮ ಪಂಚಾಯಿತಿಗಳಿಂದ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಯಾವುದೇ ತೊಂದರೆಯಾಗಿಲ್ಲ. ಸರಕಾರದಿಂದ ನಿರ್ವಹಣೆಗೆ ಅನುದಾನ ನೀಡಲಾಗಿದೆ. ಆದರೆ ಶಾಸಕರು, ಸಂಸದರು ಇತರೆ ಅನುದಾನಗಳಡಿ ನಿರ್ಮಿಸಿರುವ ಘಟಕಗಳ ನಿರ್ವಹಣೆ ತೊಂದರೆ ಉಂಟಾಗಿದ್ದು, ಶೀಘ್ರದಲ್ಲಿ ಪರಿಹಾರ ದೊರಕಿಸಿಕೊಡುವುದಾಗಿ ತಿಳಿಸಿದರು.







