ಚಳವಳಿಯ ರೂಪ ಪಡೆದ ಬೆಳಗಾವಿಯ ಕಬ್ಬು ಬೆಳೆಗಾರರ ಹೋರಾಟ; ಇದರ ರಾಜಕೀಯ, ಆರ್ಥಿಕ ಪರಿಣಾಮಗಳೇನು ?

ಬೆಳಗಾವಿ : ಕರ್ನಾಟಕದ ಸಕ್ಕರೆ ಕೈಗಾರಿಕೆಯ ಹೃದಯವೆಂದೇ ಪರಿಗಣಿಸಲ್ಪಡುವ ಬೆಳಗಾವಿ ಜಿಲ್ಲೆ ಇತ್ತೀಚಿಗೆ ಮತ್ತೊಮ್ಮೆ ರೈತರ ಆಕ್ರೋಶದ ಕೇಂದ್ರವಾಗಿದೆ. ಕಬ್ಬಿಗೆ ನ್ಯಾಯಯುತ ಬೆಲೆ ನೀಡಬೇಕೆಂಬ ಆಗ್ರಹದೊಂದಿಗೆ ಪ್ರಾರಂಭವಾದ ಹೋರಾಟ ಇದೀಗ ರಾಜ್ಯವ್ಯಾಪಿ ಚಳುವಳಿಯಾಗಿ ಮಾರ್ಪಟ್ಟಿದೆ. ಹೋರಾಟ ತೀವ್ರಗೊಳ್ಳಲು ಕಾರಣ ಕೇವಲ ದರದ ಪ್ರಶ್ನೆಯಲ್ಲ, ಅದರ ಹಿಂದೆ ವರ್ಷಗಳಿಂದ ಬೇರೂರಿರುವ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳ ಜಾಲವಿದೆ.
ಕಬ್ಬಿನ ದರ: ನ್ಯಾಯದ ಹೋರಾಟದಿಂದ ರಾಜಕೀಯ ಹೋರಾಟದತ್ತ
ಕಬ್ಬು ನುರಿಯುವ ಹಂಗಾಮು ಪ್ರಾರಂಭವಾದರೂ, ಸರಕಾರದಿಂದ ದರ ನಿಗದಿಯ ಕುರಿತು ಯಾವುದೇ ಸ್ಪಷ್ಟ ನಿರ್ಧಾರ ಬಂದಿಲ್ಲ. ರೈತರು ಟನ್‌ಗೆ 3,500 ರೂ. ದರ ನಿಗದಿ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಆದರೆ ಕಾರ್ಖಾನೆಗಳು ನೀಡಲು ಸಮ್ಮತಿಸದ ಹಿನ್ನೆಲೆ, ರೈತರ ಅಸಮಾಧಾನ ತೀವ್ರಗೊಂಡಿದೆ.
ಬೆಳೆಗಾರರಿಗೆ ತಾವೇ ಬೆಳೆದ ಕಬ್ಬಿಗೆ ನ್ಯಾಯಯುತ ಬೆಲೆ ದೊರೆಯದಿರುವುದು, ವರ್ಷದಿಂದ ವರ್ಷಕ್ಕೆ ನಡೆಯುವ ಅದೇ ರೀತಿಯ ಗೊಂದಲವನ್ನು ಪುನರಾವರ್ತಿಸುತ್ತಿದೆ.
ಹೋರಾಟದ ಆರಂಭ:
ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿನ ಬೆಲೆ ನಿಗದಿಗೆ ತಡ ಹಾಗೂ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಪಾವತಿ ಪಡೆಯಲು ರೈತರು ಗುರ್ಲಾಪುರ ಕ್ರಾಸ್ ನಲ್ಲಿ ಅಹೋರಾತ್ರಿ ಧರಣಿ ನಡೆಸಿದರು. ಇದರಲ್ಲಿ ಪ್ರಾಥಮಿಕವಾಗಿ ಸುಮಾರು 50–100 ರೈತರು ಭಾಗವಹಿಸಿದ್ದರು. ಆರಂಭದಲ್ಲಿ ಹೋರಾಟವು ಸ್ಥಳೀಯ ಮಟ್ಟದ, ಶಾಂತಿಯುತ ಪ್ರತಿಭಟನೆಯ ರೂಪದಲ್ಲಿತ್ತು.
ರೈತ ಸಂಘಗಳ ಪ್ರವೇಶ ಮತ್ತು ಬೆಂಬಲ:
ಕರ್ನಾಟಕ ರಾಜ್ಯ ರೈತ ಸಂಘ : ಹೋರಾಟದ ಮೊದಲ ದಿನದಿಂದಲೇ ಮಾರ್ಗದರ್ಶನ, ಸಂಘಟನೆ ಮತ್ತು ಶಾಂತಿಯುತ ಪ್ರತಿಭಟನೆಗಳ ನಿರ್ವಹಣೆ.
ಹಸಿರು ಸೇನೆ: ರೈತರ ಬೇಡಿಕೆಗಳು ಸರಕಾರದ ಗಮನಕ್ಕೆ ಬರಲು ಬೀದಿಯಲ್ಲಿ ಹಾಗೂ ಮಾಧ್ಯಮಗಳಲ್ಲಿ ಗಮನ ಸೆಳೆಯಿತು.
ಭಾರತೀಯ ಕೃಷಿಕ ಸಂಘ ಮತ್ತು ಭಾರತೀಯ ಕಿಸಾನ್ ಸಂಘ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ತರುವ ಮೂಲಕ ರೈತರ ಹಕ್ಕಿಗಾಗಿ ಒತ್ತಾಯ.
ಸ್ಥಳೀಯ ಯುವಕ ಸಂಘಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ರಸ್ತೆ ತಡೆ, ಬಂದ್ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಬೆಂಬಲ.
ಹೋರಾಟದ ಬೆಳವಣಿಗೆ:
ಹೋರಾಟವು ಸ್ಥಳೀಯ, ತಾಲೂಕು, ಜಿಲ್ಲಾ, ರಾಜ್ಯಮಟ್ಟದ ವಿಷಯವಾಗಿ ಬೆಳೆಯಿತು. ಶಾಂತಿಯುತ ಪ್ರತಿಭಟನೆಗಳು, ಸಾರ್ವಜನಿಕ ಬೆಂಬಲ ಮತ್ತು ಸಾಮಾಜಿಕ ಮಾಧ್ಯಮ ಪ್ರಸಾರದಿಂದ ಹೋರಾಟದ ತೀವ್ರತೆ ಹೆಚ್ಚಿತು. ಕರ್ನಾಟಕ ವಕೀಲರ ಸಂಘ ರೈತರಿಗೆ ಕಾನೂನು ಬೆಂಬಲ ಒದಗಿಸಿ ಹೋರಾಟದ ಹಾದಿಗೆ ಬೆಂಬಲ ನೀಡಿತು.
ಹೋರಾಟದ ಪ್ರಮುಖ ಪರಿಣಾಮಗಳು:
ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಪಾವತಿ, ಕಬ್ಬಿನ ಟನ್‌ಗೆ ಕನಿಷ್ಠ 3,500 ರೂ. ಬೆಲೆ, ಮತ್ತು ರೈತರ ಹಕ್ಕುಗಳ ಬಗ್ಗೆ ಸರಕಾರದ ಚರ್ಚೆ ಆರಂಭವಾಯಿತು. ಸಂಘಟನೆಗಳು, ರೈತರು, ವಿದ್ಯಾರ್ಥಿಗಳು ಮತ್ತು ವಕೀಲರ ಸಹಕಾರದಿಂದ ಹೋರಾಟ ರಾಜ್ಯಮಟ್ಟದ ಗಮನ ಸೆಳೆದಿದೆ. ಪ್ರಾಥಮಿಕ, ಸ್ಥಳೀಯ ಪ್ರತಿಭಟನೆವು ರಾಜ್ಯ ರಾಜಕೀಯ, ಕಾನೂನು, ಮತ್ತು ಸಾರ್ವಜನಿಕ ಒತ್ತಡದ ಸಮಗ್ರ ಚಳವಳಿಯಾಗಿ ಬೆಳೆಯಿತು.
ರಾಜಕೀಯ ಹಸ್ತಕ್ಷೇಪದ ಕಹಿ ನೋಟ :
ಬೆಳಗಾವಿ ಜಿಲ್ಲೆಯಲ್ಲಿನ ಸುಮಾರು 38 ಸಕ್ಕರೆ ಕಾರ್ಖಾನೆಗಳ ಪೈಕಿ ಬಹುತೇಕವು ರಾಜಕೀಯ ನಾಯಕರ ಪ್ರಭಾವದಲ್ಲಿವೆ. ಮಾಜಿ ಸಚಿವರು, ಶಾಸಕರು, ಸಂಸದರು ಹಾಗೂ ಅವರ ಕುಟುಂಬ ಸದಸ್ಯರು ಕಾರ್ಖಾನೆಗಳ ನಿರ್ವಹಣೆಯಲ್ಲಿ ನೇರವಾಗಿ ಭಾಗವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಕಬ್ಬಿನ ದರ ನಿಗದಿ ಕೇವಲ ಆರ್ಥಿಕ ವಿಷಯವಲ್ಲದೆ, ರಾಜಕೀಯ ಹಿತಾಸಕ್ತಿಯ ವ್ಯವಹಾರವಾಗಿ ಪರಿಣಮಿಸಿದೆ.
ಸರಕಾರದ ನಿರ್ಲಕ್ಷ್ಯದಿಂದ ಉರಿದ ಕೋಪ :
ಕಳೆದ ಹಂಗಾಮಿನ ಪಾವತಿಗಳೂ ಅನೇಕ ಕಾರ್ಖಾನೆಗಳಿಂದ ಇನ್ನೂ ಬಾಕಿ ಉಳಿದಿವೆ. ಸರಕಾರದಿಂದ ಸ್ಪಷ್ಟ ಮಾರ್ಗಸೂಚಿ ಇಲ್ಲದಿರುವುದು ಮತ್ತು ಮಿಡಿತದ ಮಾತುಗಳಷ್ಟೇ ಸಿಗುತ್ತಿರುವುದರಿಂದ ರೈತರು ನಿರಾಶರಾಗಿದ್ದಾರೆ. ಸರಕಾರದ ಪ್ರತಿಕ್ರಿಯೆಯ ವಿಳಂಬ, ಕಬ್ಬು ಬೆಳೆಗಾರರ ಹೋರಾಟವನ್ನು ಆರ್ಥಿಕ ಅಸಮಾಧಾನದಿಂದ ರಾಜಕೀಯ ಚಳುವಳಿಯಾಗಿಯೇ ಪರಿವರ್ತಿಸಿದೆ.
ಪ್ರತಿಪಕ್ಷದ ಬೆಂಬಲ :
ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಹೋರಾಟಗಾರರ ಬಳಿಯೇ ನಿಂತು “ರೈತರಿಗೆ ನ್ಯಾಯ ದೊರಕಬೇಕು” ಎಂದು ಘೋಷಿಸಿದ್ದಾರೆ. ಕಾಂಗ್ರೆಸ್ ಮತ್ತು ಜನತಾದಳದ ಕೆಲ ಪ್ರತಿನಿಧಿಗಳು ಕೂಡ ಸರಕಾರ ರೈತರ ಬೇಡಿಕೆಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸರಕಾರದ ನಿರ್ಲಕ್ಷ್ಯಕ್ಕೆ ವಿರುದ್ಧವಾಗಿ ಸಂಘಟನೆಗಳು ಏಕಧ್ವನಿಯಲ್ಲಿ ಸರಕಾರದ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದು, “ರೈತರು ಸಕ್ಕರೆ ಕಾರ್ಖಾನೆಗಳ ಬಾಕಿ ಹಣ ಮತ್ತು ನ್ಯಾಯಯುತ ದರಕ್ಕಾಗಿ ಹೋರಾಡುತ್ತಿದ್ದಾರೆ. ಸರಕಾರ ತಕ್ಷಣ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿವೆ.
ಕರವೇ, ರೈತ ಸಂಘಟನೆಗಳು, ಹಾಗೂ ವಿವಿಧ ಪ್ರಾದೇಶಿಕ ರೈತ ಬಣಗಳು ಹೋರಾಟಕ್ಕೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಹೋರಾಟವು ರಾಜ್ಯವ್ಯಾಪಿಯಾಗಿ ವಿಸ್ತರಿಸಿದೆ. ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್, ಸುವರ್ಣ ವಿಧಾನಸೌಧ ಮುಂಭಾಗ ಸೇರಿದಂತೆ ಅನೇಕ ಸ್ಥಳಗಳಲ್ಲಿ ರೈತರು ರಸ್ತೆ ತಡೆ, ಧರಣಿ ಹಾಗೂ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.







