ಕಬ್ಬಿಗೆ ಬೆಲೆ ನಿಗದಿ ವಿಚಾರ | ಬೆಂಗಳೂರು–ಪುಣೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ

ಬೆಳಗಾವಿ : ಕಬ್ಬಿಗೆ ಪ್ರತಿ ಟನ್ ಗೆ 3,500 ರೂ. ನೀಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ರೈತರು ನಡೆಸುತ್ತಿರುವ ಹೋರಾಟ 9ನೇ ದಿನಕ್ಕೆ ತಲುಪಿದ್ದು, ಬೆಳಗಾವಿಯಲ್ಲಿ ರೈತರು ಇಂದು ಬೆಂಗಳೂರು–ಪುಣೆ ರಾಷ್ಟ್ರೀಯ ಹೆದ್ದಾರಿ (ಎನ್ಎಚ್ 48) ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಹತ್ತರಗಿ ಟೋಲ್ ಗೇಟ್ ಬಳಿ ಸಾವಿರಾರು ರೈತರು ಜಮಾವಣೆಗೊಂಡು, ರಸ್ತೆ ಬಂದ್ ಮಾಡುವ ವೇಳೆ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸರ್ಕಾರದಿಂದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ರೈತರು ‘ಬಾರಕೋಲು’ ಚಳುವಳಿ ಆರಂಭಿಸಿದ್ದಾರೆ.
ಹೋರಾಟಗಾರರನ್ನು ಮನವೊಲಿಸಲು ಪೊಲೀಸರು ಪ್ರಯತ್ನ ನಡೆಸಿ, ಸರ್ಕಾರಕ್ಕೆ ಒಂದು ಗಂಟೆಯ ಗಡುವು ನೀಡುವಂತೆ ಮನವಿ ಮಾಡಿದ್ದಾರೆ. ನಂತರ, ರೈತರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪ್ರತಿಭಟನೆ ನಡೆಸಲು ಒಪ್ಪಿಕೊಂಡಿದ್ದಾರೆ.
ಪೊಲೀಸರ ಸಹಕಾರದಿಂದ ವಾಹನ ಸಂಚಾರ ಭಾಗಶಃ ಪುನಃ ಆರಂಭಗೊಂಡಿದ್ದು, ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸುಗಮವಾಗಿದೆ.
Next Story





