ವಾಹನಗಳ ನೋಂದಣಿಗೆ ನಕಲಿ ದಾಖಲೆ ಸೃಷ್ಟಿಸಿದರೆ ನಿರ್ದಾಕ್ಷಿಣ್ಯ ಕ್ರಮ : ರಾಮಲಿಂಗಾರೆಡ್ಡಿ

ಬೆಳಗಾವಿ : ರಾಜ್ಯದ ಯಾವುದೇ ಆರ್ ಟಿಓ ಕಚೇರಿಗಳಲ್ಲಿ ಐಷಾರಾಮಿ ಕಾರುಗಳ ನೋಂದಣಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಿಜವಾದ ವಾಹನದ ಮೌಲ್ಯವನ್ನು ಮರೆಮಾಚಿ ನೋಂದಣಿ ಮಾಡಿರುವುದು, ಮಾಡುವುದು ಸರಕಾರದ ಗಮನಕ್ಕೆ ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳು, ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.
ಬುಧವಾರ ವಿಧಾನ ಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಶರವಣ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಮಂಗಳೂರು ಮತ್ತು ಉಡುಪಿ ಆರ್.ಟಿ.ಒ ಕಚೇರಿಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕಾರಿನ ನಿಜವಾದ ಮೌಲ್ಯವನ್ನು ಮರೆಮಾಚಿ, ಸರಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಕಚೇರಿಯ ಕೇಂದ್ರ ಸ್ಥಾನೀಯ ಸಹಾಯಕರು, ಅಧೀಕ್ಷಕರು ಮತ್ತು ಪ್ರಥಮ ದರ್ಜೆ ಸಹಾಯಕರು ಹಾಗೂ ಉಡುಪಿ ಕಚೇರಿಯ ಅಧೀಕ್ಷಕರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಸಂಬಂಧ ಇಲಾಖಾ ವಿಚಾರಣೆ ಜಾರಿಯಲ್ಲಿದೆ ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರ ಪ್ರಸ್ತಾವದ ಮೇರೆಗೆ ಉಡುಪಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿರುದ್ಧ ವಿಚಾರಣೆ, ತನಿಖೆ ಕೈಗೊಳ್ಳಲು ಭ್ರಷ್ಠಾಚಾರ ಪ್ರತಿಬಂಧಕ ಕಾಯ್ದೆಯ ಕಲಂ 17(ಎ) ಅನ್ವಯ ಪೂರ್ವಾನುಮತಿಯನ್ನು ಸಹ ನೀಡಲಾಗಿರುತ್ತದೆ ಎಂದು ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.





