ʼಉಪಚುನಾವಣೆʼ ಗೆಲುವು ಪಕ್ಷದ ಬಲಕ್ಕೆ ಅನಿವಾರ್ಯ : ಸತೀಶ್ ಜಾರಕಿಹೊಳಿ

ಬೆಳಗಾವಿ : ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ನೂರಕ್ಕೆ ನೂರರಷ್ಟು ಗೆಲುವು ಸಾಧಿಸಲಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಬಾಗಲಕೋಟೆ ಕ್ಷೇತ್ರವನ್ನು ಗೆಲ್ಲುವುದು ಕಾಂಗ್ರೆಸ್‌ಗೆ ಅತ್ಯಂತ ಪ್ರಮುಖ. ಇದು ಕೇವಲ ಉಪಚುನಾವಣೆಯಲ್ಲ, ಪಕ್ಷದ ಬಲವನ್ನು ಸಾಬೀತುಪಡಿಸುವ ವೇದಿಕೆ” ಎಂದು ಹೇಳಿದರು.
“ದೊಡ್ಡ ಸಭೆಗಳಲ್ಲಿ ಜನಸಾಗರ ಸೇರಿಸುವುದರಿಂದ ಮಾತ್ರ ಗೆಲುವು ಸಾಧ್ಯವಿಲ್ಲ. ತಳಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಕೆಲಸ ಮಾಡಲಾಗಿದೆ. ಬಾಗಲಕೋಟೆ ಹಾಗೂ ದಾವಣಗೆರೆ ಎರಡೂ ಕ್ಷೇತ್ರಗಳಲ್ಲಿ ಗೆಲುವು ಅನಿವಾರ್ಯ. ಇಲ್ಲವಾದರೆ ಬಿಜೆಪಿ ಎರಡು ವರ್ಷ ನಮ್ಮ ಮೇಲೆ ರಾಜಕೀಯ ಒತ್ತಡ ತರುತ್ತಿತ್ತು” ಎಂದು ಹೇಳಿದರು.
ದಾವಣಗೆರೆಯಲ್ಲಿ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, “ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಒತ್ತಾಯ ಇದ್ದರೂ, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಅಗಲಿಕೆಯ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಟಿಕೆಟ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸಲಾಗುವುದು” ಎಂದು ತಿಳಿಸಿದರು.
ಅಹಿಂದ ವರ್ಗಗಳೇ ಕಾಂಗ್ರೆಸ್‌ನ ಬುನಾದಿಯಾಗಿದ್ದು, ಈ ವರ್ಗಗಳ ಒಗ್ಗಟ್ಟಿನಿಂದಲೇ ಬಾಗಲಕೋಟೆಯಲ್ಲಿ ಗೆಲುವು ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯ ಕುರಿತು ಪ್ರತಿಕ್ರಿಯಿಸಿದ ಅವರು, “ಈ ವಿಷಯದಲ್ಲಿ ಅಂತಿಮ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ” ಎಂದರು.
ಬಿಜೆಪಿ ನಾಯಕರ ಪ್ರಚಾರದ ಕುರಿತು ಮಾತನಾಡಿದ ಅವರು, “ಯತ್ನಾಳ್ ಅವರ ಪ್ರಚಾರ ಬಿಜೆಪಿ ಆಂತರಿಕ ವಿಷಯ. ಅದರಿಂದ ನಮಗೆ ಯಾವುದೇ ಸಂಬಂಧ ಇಲ್ಲ” ಎಂದು ಹೇಳಿದರು.
ಒಳ ಮೀಸಲಾತಿ ವಿಚಾರದಲ್ಲಿ ಸರ್ಕಾರ ಬದ್ಧವಾಗಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ದತ್ತಾಂಶ ಸಂಗ್ರಹಿಸಿ ಸಂವಿಧಾನಬದ್ಧವಾಗಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸುನೀಲ್ ಹಣಮನ್ನವರ್, ವಿನಯ ನಾವಲಗಟ್ಟಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.






