ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ | ಆರ್ಥಿಕ ತಜ್ಞ ಪ್ರೊ.ಗೋವಿಂದರಾವ್ ಸಮಿತಿ ವರದಿ ಅನುಷ್ಠಾನಕ್ಕೆ ಕ್ರಮ : ಸಿದ್ದರಾಮಯ್ಯ

ಬೆಳಗಾವಿ : ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ರಾಜ್ಯ ಸರಕಾರ ರಚಿಸಿದ್ದ ಆರ್ಥಿಕ ತಜ್ಞ ಪ್ರೊ.ಗೋವಿಂದರಾವ್ ಅವರ ನೇತೃತ್ವದ ಸಮಿತಿ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಶುಕ್ರವಾರ ವಿಧಾನಸಭೆಯ ಕಲಾಪದಲ್ಲಿ ಉತ್ತರ ಕರ್ನಾಟಕ ಚರ್ಚೆಗೆ ಉತ್ತರ ನೀಡಿದ ಅವರು, ಡಾ.ಡಿ.ಎಂ.ನಂಜುಡಪ್ಪ ಅವರ ವರದಿಯ ಅನುಷ್ಠಾನದ ಕುರಿತು ಅಧ್ಯಯನ ನಡೆಸಲು ಆರ್ಥಿಕ ತಜ್ಞ ಪ್ರೊ.ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ಬರುವ ಜನವರಿಯಲ್ಲಿ ತನ್ನ ವರದಿ ನೀಡಲಿದೆ.
ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಆರ್ಥಿಕ ತಜ್ಞೆ ಪ್ರೊ.ಛಾಯಾ ದೇವಣಗಾಂವ್ಕರ್ ಅವರ ಸಮಿತಿ 400 ಪುಟಗಳ ವರದಿ ನೀಡಿದೆ. ಈ ಎರಡು ವರದಿಗಳ ಶಿಫಾರಸ್ಸುಗಳನ್ನು ಯಥಾವತ್ತಾಗಿ ಸರಕಾರ ಅನುಷ್ಠಾನಗೊಳಿಸುವುದಾಗಿ ಪ್ರಕಟಿಸಿದರು.
46,277 ಕೋಟಿ ಖರ್ಚು:
ರಾಜ್ಯ ಸರಕಾರ ಪಂಚ ಗ್ಯಾರಂಟಿ ಯೋಜನೆಗಳಿಗೆ ಇದುವರೆಗೂ 1,06,066 ಕೋಟಿ ಖರ್ಚು ಮಾಡಿದೆ. ಇದರಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ 46,277 ಕೋಟಿ ಹಣ ವ್ಯಯಿಸಲಾಗಿದೆ. ಸಾಮಾಜಿಕ ಹಾಗೂ ಅರ್ಥಿಕ ಅಸಮತೋಲನ ಸರಿಪಡಿಸುವ ಸಲುವಾಗಿಯೇ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ದಕ್ಷಿಣ ಭಾಗದಲ್ಲಿ ಶೇ.58 ರಷ್ಟು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಶೇ.42 ರಷ್ಟು ಜನಸಂಖ್ಯೆಯಿದೆ. ಆದರೆ ಗ್ಯಾರೆಂಟಿ ಯೋಜನೆಗಳಡಿ ಶೇ.43.63 ರಷ್ಟು ಹಣವನ್ನು ಉತ್ತರ ಕರ್ನಾಟಕ ಭಾಗಕ್ಕೆ ಖರ್ಚು ಮಾಡಿದೆ ಎಂದು ವಿವರಿಸಿದರು.
ರಾಜ್ಯದ ಜನಸಂಖ್ಯೆ 6.95 ಕೋಟಿ ಎಂದು ಅಂದಾಜಿಸಲಾಗಿದೆ. ಈ ಪೈಕಿ ಉತ್ತರ ಕರ್ನಾಟಕ ಭಾಗದ ಜನಸಂಖ್ಯೆ 2,96,28,767 ಆಗಿದೆ. ಸುಮಾರು 4 ಕೋಟಿಗೂ ಅಧಿಕ ಜನರು ದಕ್ಷಿಣ ಕರ್ನಾಟಕ ಭಾಗದಲ್ಲಿ ವಾಸವಾಗಿದ್ದಾರೆ. 31 ಜಿಲ್ಲೆಗಳ ಪೈಕಿ 14 ಜಿಲ್ಲೆಗಳು ಉತ್ತರ ಕರ್ನಾಟಕ ಭಾಗದಲ್ಲಿವೆ. 224 ವಿಧಾನಸಭೆ ಕ್ಷೇತ್ರಗಳ ಪೈಕಿ 97 ವಿಧಾನಸಭೆ ಕ್ಷೇತ್ರಗಳು ಉತ್ತರ ಕರ್ನಾಟಕದಲ್ಲಿವೆ. ರಾಜ್ಯದ ಸರಾಸರಿ ತಲಾ ಆದಾಯ 3,39,813 ರೂಪಾಯಿಗಳಾಗಿದೆ. ರಾಜ್ಯ ತಲಾ ಆದಾಯದಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಅವರು ಉಲ್ಲೇಖಿಸಿದರು.
ಗ್ಯಾರೆಂಟಿ ಯೋಜನೆಗಳ ಅನುಷ್ಠಾನದ ಫಲವಾಗಿ ತಲಾ ಆದಾಯ ಹೆಚ್ಚಾಗಿದೆ. ಆದರೆ ಉತ್ತರ ಕರ್ನಾಟಕದ 10 ಜಿಲ್ಲೆಗಳ ತಲಾ ಆದಾಯ 2 ಲಕ್ಷಕ್ಕಿಂತ ಕಡಿಮೆಯಿದೆ. ಕಲಬುರಗಿ ತಲಾ ಆದಾಯದಲ್ಲಿ ಕೊನೆಯ ಸ್ಥಾನದಲ್ಲಿದೆ. ಇದು ಪ್ರಾದೇಶಿಕ ಅಸಮತೋಲವನ್ನು ಎತ್ತಿ ತೋರಿಸುತ್ತದೆ. ಅಸಮಾನತೆ ಇದ್ದರೆ ಸಂವಿಧಾನ ಧ್ಯೇಯೊದ್ದೇಶಗಳು ಈಡೇರಿಕೆಯಾಗುವುದಿಲ್ಲ. ಸ್ವಾತಂತ್ರ್ಯ ಪಡೆದಿದ್ದಕ್ಕೆ ಸಾರ್ಥಕತೆ ಇರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
24,778 ಕೋಟಿ ಅನುದಾನ:
ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ 1990ರಲ್ಲಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಯಿತು. 2013ರಲ್ಲಿ ಕೇಂದ್ರ ಸರಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು 371(ಜೆ) ಅಡಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿತು. ತದ ನಂತರ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ(ಕೆಕೆಆರ್‍ಡಿಬಿ)ಯಾಗಿ ಮರುನಾಮಕರಣ ಮಾಡಲಾಗಿದ್ದು, ಇದುವರೆಗೂ 24,778 ಕೋಟಿ ಅನುದಾನ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
371(ಜೆ) ತಿದ್ದುಪಡಿಯ ನಂತರ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಚ್.ಕೆ.ಪಾಟೀಲ್ ಅವರ ಅಧ್ಯಕ್ಷತೆಯ ಸಮಿತಿ ಮಾಡಿ ವರದಿ ಪಡೆಯಲಾಯಿತು. ಈ ವರದಿಯಲ್ಲಿ ಸೂಚಿಸಿದ ಮಾದರಿಯಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಎ ಹಾಗೂ ಬಿ ಗ್ರೂಪ್ ಹುದ್ದೆಗಳಲ್ಲಿ ಶೇ.75 ರಷ್ಟು, ಸಿ ಗ್ರೂಪ್ ಹುದ್ದೆಗಳಲ್ಲಿ ಶೇ.80 ಹಾಗೂ ಡಿ ಗ್ರೂಪ್ ಹುದ್ದೆಗಳಲ್ಲಿ ಶೇ.85 ಹಾಗೂ ರಾಜ್ಯದ ಇತರೆ ಭಾಗಗಳಲ್ಲಿ ಶೇ.8 ರಷ್ಟು ಮೀಸಲಾತಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿಯನ್ನು ಹೈದರಾಬಾದ್ ಕರ್ನಾಟಕ ಅಭ್ಯರ್ಥಿಗಳಿಗೆ ನೀಡಲಾಗಿದೆ.
ಇದರ ಪರಿಣಾಮವಾಗಿ ಇದುವರೆಗೂ ಈ ಭಾಗದ ವಿದ್ಯಾರ್ಥಿಗಳಿಗೆ 10,000 ವೈದ್ಯಕೀಯ, 31,000 ಇಂಜಿನಿಯರಿಂಗ್, ಡೆಂಟಲ್, ಹೋಮಿಯೋಪತಿ ಸೇರಿದಂತೆ ಇತರೆ ವ್ಯಾಸಾಂಗಗಳಿಗೆ 12,000 ಸೀಟುಗಳು ಲಭ್ಯವಾಗಿವೆ. ಉನ್ನತ ವ್ಯಾಸಾಂಗದಲ್ಲಿ ಒಟ್ಟು 51,606 ವಿದ್ಯಾರ್ಥಿಗಳಿಗೆ ಲಾಭವಾಗಿದೆ. ರಾಜ್ಯ ಸರಕಾರ 900 ಕೆಪಿಎಸ್ ಶಾಲೆಗಳನ್ನು ತೆರೆಯಲು ಅನುಮೊದನೆ ನೀಡಿದೆ. ಈ ಪೈಕಿ 300 ಶಾಲೆಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ತೆರೆಯಲಾಗುವುದು. ಇದರೊಂದಿಗೆ ಈ ಭಾಗದಲ್ಲಿ ಖಾಲಿಯಿರುವ 32,000 ಹುದ್ದೆಗಳ ಭರ್ತಿಗೂ ಅನುಮೋದನೆ ನೀಡಲಾಗಿದೆ ಎಂದರು.
ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆ:
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮಾದರಿಯಲ್ಲಿ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಿ, ಪ್ರತಿ ವರ್ಷ 5000 ಕೋಟಿ ರೂ. ಅನುದಾನ ನೀಡುವಂತೆ ಕಾಂಗ್ರೆಸ್ ಸದಸ್ಯ ಎನ್.ಹೆಚ್.ಕೋನರೆಡ್ಡಿ ನೇತೃತ್ವದಲ್ಲಿ ಈ ಭಾಗದ ಎಲ್ಲ ಶಾಸಕರು ಮನವಿ ನೀಡಿದ್ದಾರೆ. ಪ್ರೊ.ಗೋವಿಂದರಾವ್ ಅವರ ವರದಿ ಬಳಿಕ ಈ ಕುರಿತು ಪರೀಶಿಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ತಲಾ ಆದಾಯದಲ್ಲಿ ಮುಂಚೂಣಿ: ‘ತಲಾ ಆದಾಯದಲ್ಲಿ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ರಾಜ್ಯದ ಸರಾಸರಿ ತಲಾ ಆದಾಯ 3,39,813 ರೂ.ಇದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಜನರ ತಲಾದಾಯ ರಾಜ್ಯದ ಇತರೆಡೆಗೆ ಹೋಲಿಸಿದರೆ ಕಡಿಮೆ ಇದೆ. ಬೆಂಗಳೂರು ನಗರ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ ಜಿಲ್ಲೆಗಳ ತಲಾ ಆದಾಯ 3.4ಲಕ್ಷ ರೂ.ಗಳಿಗಿಂತ ಹೆಚ್ಚಿದ್ದು, 10 ಜಿಲ್ಲೆಗಳ ತಲಾ ಆದಾಯ ಎರಡೂವರೆ ಲಕ್ಷದಿಂದ ನಾಲ್ಕು ಲಕ್ಷ ರೂ.ಗಳ ವರೆಗೆ ಇದೆ. ಇದು ಮಂಡ್ಯ, ತುಮಕೂರು, ಕೊಡಗು, ಹಾಸನ, ಬಳ್ಳಾರಿ, ಉತ್ತರ ಕನ್ನಡ, ಚಾಮರಾಜನಗರ, ಬಾಗಲಕೋಟೆ ಜಿಲ್ಲೆಗಳಾಗಿವೆ. 2 ಲಕ್ಷಕ್ಕಿಂತ ಕಡಿಮೆ ತಲಾ ಆದಾಯ ಹೊಂದಿರುವ ಜಿಲ್ಲೆಗಳೆಂದರೆ ಚಿತ್ರದುರ್ಗ, ಗದಗ, ಹಾವೇರಿ, ರಾಯಚೂರು, ವಿಜಯನಗರ, ವಿಜಯಪುರ, ಬೀದರ್, ಬೆಳಗಾವಿ, ಕೊಪ್ಪಳ, ಯಾದಗಿರಿ, ಕಲಬುರಗಿ ಜಿಲ್ಲೆಗಳು’
-ಸಿದ್ದರಾಮಯ್ಯ, ಮುಖ್ಯಮಂತ್ರಿ







