ಮಹಾನಗರ ಪಾಲಿಕೆಗಳಿಗೆ ತಲಾ 200 ಕೋಟಿ ರೂ.ವಿಶೇಷ ಅನುದಾನ ಬಿಡುಗಡೆ : ಸಚಿವ ಬೈರತಿ ಸುರೇಶ್

ಬೈರತಿ ಸುರೇಶ್
ಬೆಳಗಾವಿ (ಸುವರ್ಣವಿಧಾನಸೌಧ) ಡಿ. 12: ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳಿಗೆ ತಲಾ 200 ಕೋಟಿ ರೂ.ಗಳಂತೆ ಒಟ್ಟು 2,400 ಕೋಟಿ ರೂ.ಗಳ ವಿಶೇಷ ಅನುದಾವನ್ನು ನೀಡಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಹೇಳಿದರು.
ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ದಿನಕರ್ ಕೇಶವ್ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರ ನೀಡುವ ವೇಳೆ ಮಾಹಿತಿ ನೀಡಿದ ಅವರು, ಈ ಹಿಂದೆ ಒಂದೇ ಅವಧಿಯಲ್ಲಿ ಇಷ್ಟು ದೊಡ್ಡ ಮೊತ್ತದ ಅನುದಾನವನ್ನು ಯಾವುದೇ ಸರಕಾರ ನೀಡಿರಲಿಲ್ಲ. ಆದರೆ, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಚ್ಚಿನ ಅನುದಾನವನ್ನು ನೀಡಿದ್ದಾರೆ ಎಂದು ತಿಳಿಸಿದರು.
ಸದ್ಯಕ್ಕೆ ಪುರಸಭೆ ರಚನೆ ಇಲ್ಲ :
ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳನ್ನಾಗಿ ಉನ್ನತೀಕರಿಸುವ ವೇಳೆ ಹತ್ತಿರ ಇರುವ ಗ್ರಾಮಾಂತರ ಪ್ರದೇಶಗಳನ್ನು ಸೇರ್ಪಡೆ ಮಾಡಿ ಸರಹದ್ದು ನಿಗದಿಪಡಿಸಲಾಗುತ್ತಿದೆ. ಆದರೆ, ಕೆಲ ಶಾಸಕರು ನಗರಸಭೆ ವ್ಯಾಪ್ತಿಯಿಂದ ಗ್ರಾಮಗಳನ್ನು ಕೈಬಿಡುವಂತೆ ಮನವಿ ಮಾಡುತ್ತಾರೆ. ಇದು ಕಷ್ಟದ ಕೆಲಸವಾಗಿದೆ. ಸರಕಾರ ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿದ ಗ್ರಾಮಗಳ ಅಭಿವೃದ್ಧಿಗೆ ಹಣ ನೀಡಲಿದೆ, ಶಾಸಕರು ತಾಳ್ಮೆ ವಹಿಸಬೇಕು ಎಂದು ಬಿ.ಎಸ್.ಸುರೇಶ್ ತಿಳಿಸಿದರು.
ಕರ್ನಾಟಕ ಪೌರಸಭೆಗಳ ಅಧಿನಿಯಮದ ಮಾನದಂಡಗಳ ಪ್ರಕಾರ 20ಸಾವಿರದಿಂದ 50ಸಾವಿರ ಜನಸಂಖ್ಯೆ ಅಥವಾ ಚದರ ಮೀಟರ್ ಗೆ 1,500 ಜನಸಾಂದ್ರತೆ, 9 ಲಕ್ಷ ರೂ.ರಾಜಸ್ವ ಆದಾಯ, ಇಲ್ಲವೆ ಶೇ.50ರಷ್ಟು ಕೃಷಿಯೇತರ ಚಟುವಟಿಕೆ ನಡೆಯುತ್ತಿದ್ದರೆ, ಅಂತಹ ಸ್ಥಳವನ್ನು ಪುರಸಭೆಯನ್ನಾಗಿ ಉನ್ನತಿಕರಿಸಲಾಗುವುದು. ಆದರೆ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ 2011ರ ಜನಗಣತಿ ಅನ್ವಯ 19,109 ಜನಸಂಖ್ಯೆಯಿದೆ. ಈ ಹಿನ್ನಲೆಯಲ್ಲಿ ಹೊನ್ನಾವರ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ತಿರಸ್ಕರಿಸಲಾಗಿದೆ ಎಂದು ಬಿ.ಎಸ್.ಸುರೇಶ್ ಪೌರಾಡಳಿತ ಸಚಿವ ರಹೀಂ ಖಾನ್ ಪರವಾಗಿ ಉತ್ತರಿಸಿದರು.







