ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಕುರಿತ ಹೇಳಿಕೆ : ಸ್ಪಷ್ಟನೆ ನೀಡಿದ ಯತೀಂದ್ರ ಸಿದ್ದರಾಮಯ್ಯ

ಯತೀಂದ್ರ ಸಿದ್ದರಾಮಯ್ಯ
ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಯೊಂದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಈ ಕುರಿತು ಅವರು ಸ್ಪಷ್ಟನೆ ನೀಡಿದ್ದಾರೆ.
ತಂದೆಯವರು ಸದಾ ಸಾಮಾಜಿಕ ನ್ಯಾಯ ಮತ್ತು ಜಾತ್ಯಾತೀತ ಸಿದ್ದಾಂತಗಳಲ್ಲಿ ನಂಬಿಕೆ ಇಟ್ಟುಕೊಂಡವರು. ಅದೇ ದಾರಿಯಲ್ಲಿ ಸತೀಶ್ ಜಾರಕಿಹೊಳಿ ಕೂಡ ನಂಬಿಕೆ ಇಟ್ಟುಕೊಂಡು ನಡೆಯುತ್ತಿದ್ದಾರೆ. ಆ ರೀತಿ ಸೈದ್ಧಾಂತಿಕವಾಗಿ ರಾಜಕಾರಣ ಮಾಡುವವರನ್ನು ಲೀಡ್ ಮಾಡಲಿ ಅನ್ನೋ ಉದ್ದೇಶ ಇಟ್ಟುಕೊಂಡು ಹೇಳಿದ್ದೇನೆ ಹೊರತು ರಾಜಕೀಯ ಉತ್ತರಾಧಿಕಾರಿ ಬಗ್ಗೆ ನಾನು ಮಾತನಾಡಿಲ್ಲ ಎಂದಿದ್ದಾರೆ.
2028ರ ಚುನಾವಣೆಯಲ್ಲಿ ತಂದೆಯವರು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಅದರ ನಂತರವೂ ಕಾಂಗ್ರೆಸ್ನ ಜಾತ್ಯಾತೀತ ಸಿದ್ದಾಂತವನ್ನು ಮುಂದುವರಿಸುವ ಅನೇಕ ರಾಜಕಾರಣಿಗಳು ನಮ್ಮೊಂದಿಗಿದ್ದಾರೆ. ಅವರನ್ನೆಲ್ಲ ಸತೀಶ್ ಜಾರಕಿಹೊಳಿ ಮುನ್ನಡೆಸಲಿ ಎಂಬುದು ನನ್ನ ಆಶಯ ಎಂದು ಹೇಳಿದ್ದಾರೆ.
ನವೆಂಬರ್ ಕ್ರಾಂತಿ ಕೇವಲ ಊಹಾಪೋಹ :
ನವೆಂಬರ್ ಕ್ರಾಂತಿ ಕೇವಲ ಊಹಾಪೋಹ. ಪಕ್ಷದೊಳಗೆ ಯಾವುದೇ ನಾಯಕತ್ವ ಬದಲಾವಣೆ ಚರ್ಚೆಯೇ ನಡೆದಿಲ್ಲ. ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಆಗುತ್ತಾರೆ ಎಂಬ ಮಾತುಗಳಿಗೂ ತಾತ್ತ್ವಿಕ ಆಧಾರ ಇಲ್ಲ. ಅಂತಹ ಅರ್ಹತೆ ಹೊಂದಿರುವ ಅನೇಕ ನಾಯಕರು ಪಕ್ಷದಲ್ಲಿ ಇದ್ದಾರೆ. ಅಂತಿಮ ತೀರ್ಮಾನ ಹೈಕಮಾಂಡ್ ಕೈಯಲ್ಲಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿಯಾದ ಬಳಿಕ ಅವರ ಸ್ಥಾನ ತುಂಬುವ ಶಕ್ತಿ ಕೆಲವೇ ನಾಯಕರಲ್ಲಿ ಸತೀಶ್ ಜಾರಕಿಹೊಳಿ ಅವರಿಗೆ ಖಂಡಿತವಾಗಿಯೂ ಇದೆ ಎಂದು ಹೇಳಿದರು.







