ಹಣ ವಸೂಲಿಗಾಗಿ ಸಿಸೇರಿಯನ್ ಹೆರಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ : ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್/ PC : freepik
ಬೆಳಗಾವಿ(ಸುವರ್ಣವಿಧಾನಸೌಧ) : ರಾಜ್ಯದಲ್ಲಿ ಹಣ ವಸೂಲಿಗಾಗಿ ಅನಗತ್ಯವಾಗಿ ಸಿಸೇರಿಯನ್ ಹೆರಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸೋಮವಾರ ಪರಿಷತ್ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಹಣ ವಸೂಲಿಗಾಗಿ ಅನಗತ್ಯವಾಗಿ ಸಿಸೇರಿಯನ್ ಹೆರಿಗೆ ಮಾಡುವಂತಹ ಖಾಸಗಿ ಆಸ್ಪತ್ರೆಗಳನ್ನು ನಿರ್ದಿಷ್ಟವಾಗಿ ಗುರುತಿಸಿಲ್ಲ ಹಾಗೂ ಅನಗತ್ಯವಾಗಿ ಸಿಸೇರಿಯನ್ ಹೆರಿಗೆ ಮಾಡಿರುವ ಬಗ್ಗೆ, ಜಿಲ್ಲಾ, ಕೆಪಿಎಂಇ ನೋಂದಣಿ ಮತ್ತು ಕುಂದು ಕೊರತೆ ನಿವಾರಣಾ ಪ್ರಾಧಿಕಾರದಲ್ಲಿ ಯಾವುದೇ ದೂರುಗಳು ಸಾರ್ವಜನಿಕರಿಂದ ಸ್ವೀಕೃತವಾಗಿಲ್ಲ ಎಂದರು.
ಈ ಬಗ್ಗೆ ದೂರುಗಳು ಬಂದಲ್ಲಿ ನಿಯಮ ಉಲ್ಲಂಘಿಸಿದ ಖಾಸಗಿ ಆಸ್ಪತ್ರೆಯ ವಿರುದ್ಧ ಕೆಪಿಎಂಇ ಅಧಿನಿಯಮದ ಸೆಕ್ಷನ್ 15 ಉಪಬಂಧ 1ರನ್ವಯ ಕ್ರಮ ಜರುಗಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಗರ್ಭಿಣಿಯರಿಗೆ ತಪಾಸಣೆ ಮಾಡುವ ಸಂದರ್ಭದಲ್ಲಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಅನುಸರಿಬೇಕಾದ ನೀತಿ ನಿಯಮಗಳಿದ್ದು, ಅವುಗಳನ್ನು ಉಲ್ಲಂಘಿಸಿದ ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.





