ಕಬ್ಬು ಬೆಳೆಗಾರರಿಗೆ ಲಾಭ ಹಂಚಿಕೆ ಸೂತ್ರ ಜಾರಿ
► ಪ್ರತೀ ಟನ್ಗೆ 3,500 ರೂ. ಮುಂಗಡ ದರ ► ಹೆಚ್ಚುವರಿ ಲಾಭದಲ್ಲಿ ರೈತರಿಗೆ ಶೇ.75ರಷ್ಟು ಪಾಲು

ಸಾಂದರ್ಭಿಕ ಚಿತ್ರ | PC : Gemini AI
ಬೆಳಗಾವಿ : ಕಬ್ಬಿನ ಬೆಲೆ ನಿಗದಿ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಕಬ್ಬು ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ.ಇತಿಹಾಸದಲ್ಲೇ ಮೊದಲ ಬಾರಿಗೆ ಲಾಭ ಹಂಚಿಕೆ ಸೂತ್ರದಡಿ ಕಬ್ಬಿನ ದರ ನಿಗದಿಪಡಿಸಲು ನಿರ್ಧರಿಸಲಾಗಿದ್ದು, ಸಕ್ಕರೆ ಕಾರ್ಖಾನೆಗಳ ಮಾಲಕರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ಲೋಕೋಪಯೋಗಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಪ್ರಭಾರಿ ಜಿಲ್ಲಾಧಿಕಾರಿ ರಾಹುಲ್ ಶಿಂಧೆ ಸಮ್ಮುಖದಲ್ಲಿ ನಡೆದ ರೈತ ಮುಖಂಡರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲಕರ ಸಭೆಯಲ್ಲಿ ಈ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಹಲವು ದಿನಗಳಿಂದ ಕಬ್ಬಿನ ದರ ಹೆಚ್ಚಳಕ್ಕೆ ಆಗ್ರಹಿಸಿ ನಡೆಯುತ್ತಿದ್ದ ರೈತರ ಹೋರಾಟಕ್ಕೆ ತಾತ್ಕಾಲಿಕ ಪರಿಹಾರ ದೊರೆತಂತಾಗಿದೆ.
ಪ್ರತೀ ಟನ್ ಕಬ್ಬಿಗೆ 3,500 ರೂ. ಮುಂಗಡ ದರ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ 3,500 ರೂ. ಮುಂಗಡ ದರ ನೀಡಲು ಕಾರ್ಖಾನೆಗಳು ಒಪ್ಪಿಕೊಂಡಿವೆ. ಹಿಂದಿನ ಹಂಗಾಮಿಗೆ ಹೋಲಿಸಿದರೆ ಈ ಬಾರಿ ಪ್ರತೀ ಟನ್ಗೆ 350 ರೂ. ಹೆಚ್ಚುವರಿ ಪಾವತಿಯಾಗಲಿದೆ. ಹಂಗಾಮು ಮುಕ್ತಾಯಗೊಂಡ ಬಳಿಕ ಎರಡನೇ ಕಂತಿನಲ್ಲಿ ಪ್ರತೀ ಟನ್ಗೆ 100 ರೂ. ಹೆಚ್ಚುವರಿಯಾಗಿ ನೀಡಲು ನಿರ್ಧರಿಸಲಾಗಿದೆ. ಇದರಿಂದ ಆರಂಭಿಕ ಹಂತದಲ್ಲಿ ಪ್ರತೀ ಟನ್ ಕಬ್ಬಿಗೆ 3,600 ರೂ. ಪಾವತಿಯಾಗಲಿದೆ.
ಸಕ್ಕರೆ ದರ ಆಧರಿಸಿ ಅಂತಿಮ ಪಾವತಿಹೊಸ ಹಂಗಾಮು ಆರಂಭವಾಗುವ ಮೊದಲು ಸಕ್ಕರೆಯ ಸರಾಸರಿ ಮಾರುಕಟ್ಟೆ ದರ ಪ್ರತೀ ಕೆ.ಜಿ.ಗೆ ರೂ.45 ಮೀರಿದರೆ, ಅದರ ಆಧಾರದ ಮೇಲೆ ರೈತರಿಗೆ ಹೆಚ್ಚುವರಿ ಹಣ ಪಾವತಿಸಲಾಗುತ್ತದೆ. ಒಪ್ಪಂದದ ಲೆಕ್ಕಾಚಾರದ ಪ್ರಕಾರ ಸಕ್ಕರೆಯ ಸರಾಸರಿ ದರ 48 ರೂ. ಇದ್ದರೆ ಪ್ರತಿ ಟನ್ ಕಬ್ಬಿಗೆ 3,650 ರೂ., 49 ರೂ. ಇದ್ದರೆ 3,750 ರೂ., 50 ರೂ. ಇದ್ದರೆ 3,850 ರೂ. ಹಾಗೂ 55 ರೂ. ಇದ್ದರೆ 4,350 ರೂ. ದರ ನಿಗದಿಯಾಗಲಿದೆ.
ಈ ಪ್ರಕ್ರಿಯೆಯಲ್ಲಿ ಈಗಾಗಲೇ ಪಾವತಿಸಿರುವ 3,600 ರೂ. ಕಡಿತಗೊಳಿಸಿ ಉಳಿಯುವ ಹೆಚ್ಚುವರಿ ಮೊತ್ತದಲ್ಲಿ ಶೇ.75ರಷ್ಟು ರೈತರಿಗೆ ಹಾಗೂ ಶೇ.25ರಷ್ಟು ಸಕ್ಕರೆ ಕಾರ್ಖಾನೆಗಳಿಗೆ ಹಂಚಿಕೆಯಾಗಲಿದೆ. ಈ ಮೂಲಕ ಸಕ್ಕರೆ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆಯ ಲಾಭ ರೈತರಿಗೂ ದೊರೆಯುವ ವ್ಯವಸ್ಥೆ ಕಲ್ಪಿಸಲಾಗಿದೆ.
ತಕ್ಷಣ ಕಬ್ಬು ನುರಿಸುವ ಹಂಗಾಮು ಆರಂಭಕ್ಕೆ ಒಪ್ಪಿಗೆ ತೀವ್ರ ನೀರಿನ ಕೊರತೆ ಹಾಗೂ ಬರ ಪರಿಸ್ಥಿತಿಯಿಂದ ಕಬ್ಬಿನ ಬೆಳೆ ಹಾನಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಬ್ಬು ನುರಿಸುವ ಹಂಗಾಮನ್ನು ತಕ್ಷಣ ಆರಂಭಿಸುವ ಬಗ್ಗೆಯೂ ಸಭೆಯಲ್ಲಿ ಒಮ್ಮತ ಮೂಡಿದೆ.






