ಬೆಳಗಾವಿ | ಕಬ್ಬಿಗೆ ಬೆಲೆ ನಿಗದಿ ವಿಚಾರ; ರೈತರಿಂದ ಬೃಹತ್ ಬೈಕ್ ರ‍್ಯಾಲಿ

ಬೆಳಗಾವಿ : ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌ನಲ್ಲಿ ಕಬ್ಬು ಬೆಳೆಗಾರರ ಹೋರಾಟ ಇಂದು ಎಂಟನೇ ದಿನಕ್ಕೆ ಕಾಲಿಟ್ಟಿದೆ. ಕಬ್ಬಿನ ದರ ನಿಗದಿಯಲ್ಲಿ ಸರಕಾರ ವಿಳಂಬ ಮಾಡಿರುವ ಹಿನ್ನೆಲೆಯಲ್ಲಿ ರೈತರು ಬೃಹತ್ ಬೈಕ್ ರ‍್ಯಾಲಿ ನಡೆಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗೋಕಾಕ್ ನಗರ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ರೈತರು ಹಾಗೂ ಯುವಕರು ಬೈಕ್‌ಗಳಲ್ಲಿ ಸೇರಿಕೊಂಡು ಸುಮಾರು 15 ಕಿಲೋಮೀಟರ್ ರ‍್ಯಾಲಿ ನಡೆಸಿದರು. ರ‍್ಯಾಲಿಯ ವೇಳೆ “ಕಬ್ಬಿಗೆ ನ್ಯಾಯ ನೀಡಿ”, “ಟನ್‌ಗೆ 3,500 ನಿಗದಿ ಮಾಡಬೇಕು” ಎಂಬ ಘೋಷಣೆಗಳನ್ನು ಕೂಗಿದರು.
ಕಬ್ಬು ನುರಿಯುವ ಹಂಗಾಮು ಆರಂಭವಾದರೂ ಸರಕಾರ ಇನ್ನೂ ಸ್ಪಷ್ಟ ಬೆಲೆ ಘೋಷಣೆ ಮಾಡದಿರುವುದರಿಂದ ರೈತರು ಟನ್‌ಗೆ 3,500 ನಿಗದಿ ಮಾಡುವಂತೆ ಆಗ್ರಹಿಸಿದ್ದಾರೆ. ರೈತರ ಹೋರಾಟಕ್ಕೆ ದಿನೇ ದಿನೇ ಜನಬೆಂಬಲ ಹೆಚ್ಚಾಗುತ್ತಿದ್ದು, ಮಹಿಳೆಯರು, ಯುವಕರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಪ್ರತಿಭಟನೆಯಲ್ಲಿ ರೈತರು ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ತಮ್ಮ ಬೇಡಿಕೆ ಪೂರೈಸುವವರೆಗೆ ಹೋರಾಟ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಗುರ್ಲಾಪುರ ಕ್ರಾಸ್‌ನಲ್ಲಿ ರೈತರು ಶಿಬಿರ ಹಾಕಿ ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ.







