ಬಿಜೆಪಿ ಸದಸ್ಯರ ವಿರೋಧದ ನಡುವೆ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಅಂಗೀಕಾರ

ಬೆಳಗಾವಿ : ಬಿಜೆಪಿ ಸದಸ್ಯರ ತೀವ್ರ ವಿರೋಧ ಹಾಗೂ ಪ್ರತಿಭಟನೆ ನಡುವೆಯೆ 2025ನೆ ಸಾಲಿನ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕಕ್ಕೆ ಗುರುವಾರ ವಿಧಾನಸಭೆಯಲ್ಲಿ ಅಂಗೀಕಾರ ಲಭಿಸಿತು.
ವಿಧಾನಸಭೆಯಲ್ಲಿ ಈ ವಿಧೇಯಕದ ಕುರಿತು ವಿವರಣೆ ನೀಡಿದ ಪರಮೇಶ್ವರ್, ಇತ್ತೀಚೆಗೆ ಬಹಳಷ್ಟು ಜನರು ಸಮಾಜಕ್ಕೆ ನೋವಾಗುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಯಾರು ದ್ವೇಷ ಭಾಷಣ ಮಾಡಿದ್ದಾರೆ ಎಂದು ಹೇಳೋದು ಸಮಂಜಸವಲ್ಲ. ಆದರೆ, ಅಂತಹ ದ್ವೇಷ ಭಾಷಣಗಳನ್ನು ಮಾಡುವುದರಿಂದ ಸಮಾಜದ ಮೇಲೆ ಆಗುವ ಪರಿಣಾಮವನ್ನು ನೋಡಬೇಕಾಗುತ್ತದೆ. ಹಲವಾರು ಕೊಲೆಗಳು ಆಗಿವೆ, ಹೊಡೆದಾಟಗಳು ಆಗಿವೆ, ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ಹೇಳಿದರು.
ದ್ವೇಷ ಭಾಷಣವನ್ನು ಮಾಡುವವರನ್ನು ನಿರ್ಬಂಧಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಇಂತಹ ಪ್ರವೃತ್ತಿಯ ಮೇಲೆ ನಿಯಂತ್ರಣ ಹೇರಲು ಕಾನೂನಿನ ಬಲ ಬೇಕಾಗುತ್ತದೆ. ಆದುದರಿಂದ, ಮೊದಲ ಬಾರಿ ದ್ವೇಷ ಭಾಷಣ ಮಾಡಿದರೆ 1 ವರ್ಷದಿಂದ 7 ವರ್ಷಗಳವರೆಗೆ ಶಿಕ್ಷೆ, 50 ಸಾವಿರ ರೂ.ದಂಡ, ಪುನರಾವರ್ತಿತ ಅಪರಾಧಗಳಿಗೆ 2 ವರ್ಷದಿಂದ 7 ವರ್ಷಗಳವರೆಗೆ ಶಿಕ್ಷೆ ಹಾಗೂ 1 ಲಕ್ಷ ರೂ.ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಜಾಮೀನು ರಹಿತವಾದ ಪ್ರಕರಣ ಇದಾಗಲಿದ್ದು, ವ್ಯಕ್ತಿಗಳು, ನೋಂದಣಿಯಾದ ಹಾಗೂ ನೋಂದಣಿಯಾಗದ ಎಲ್ಲ ಸಂಘ ಸಂಸ್ಥೆಗಳಿಗೂ ಅನ್ವಯಿಸಲಿದೆ ಎಂದು ಪರಮೇಶ್ವರ್ ಹೇಳಿದರು.
ವಿಧೇಯಕದ ಕುರಿತು ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಇಂತಹ ಒಂದು ಕಾನೂನು ಜಾರಿಗೆ ತರಬೇಕು ಯಾವ ತಜ್ಞರಿಗೂ ಬಾರದ ಆಲೋಚನೆ ನಮ್ಮ ಡಾ.ಪರಮೇಶ್ವರ್ ಅವರಿಗೆ ಯಾಕೆ ಬಂತು? ಇವರು ಹೃದಯ ವೈಶಾಲ್ಯತೆ ಹೊಂದಿರುವವರು ಎಂದು ನಾವು ಭಾವಿಸಿದ್ದೆವು. ಆದರೆ, ಈ ವಿಧೇಯಕ ಹೃದಯ ಹಿಂಡುವಂತಿದೆ. ಈ ವಿಧೇಯಕವು ಕಾನೂನಿನ ರೂಪ ಪಡೆದ ಬಳಿಕ ಪೊಲೀಸರಿಗೆ ವಸೂಲಿ ಮಾಡಲು ಅವಕಾಶ ಕಲ್ಪಿಸುವುದಲ್ಲದೆ, ಅವರು ಹಿಟ್ಲರ್ ಗಳಾಗುತ್ತಾರೆ ಎಂದು ಹೇಳಿದರು.
ಈ ಕಾನೂನು ಜಾರಿಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಆಗಲಿದೆ. ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಗಳನ್ನು ಬರೆಯಲು ಅವಕಾಶ ಇರುವುದಿಲ್ಲ. ಮಾಧ್ಯಮಗಳು ಸುದ್ದಿಗಳನ್ನು ಪ್ರಸಾರ ಮಾಡುವ ಮುನ್ನ ಜಾಮೀನು ಅರ್ಜಿ ಸಲ್ಲಿಸಿರಬೇಕು. ಯಾರೊ ಒಬ್ಬರೂ ದ್ವೇಷ ಭಾಷಣ ಮಾಡಿದರೆ, ಇಡೀ ಸಂಸ್ಥೆಯನ್ನು ಹೊಣೆಗಾರರನ್ನಾಗಿಸುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದ ಅವರು, ‘ನೋ ಬೇಲ್-ಗೋ ಜೈಲ್’(ಜಾಮೀನು ಇಲ್ಲ, ಜೈಲಿಗೆ ಹೋಗಿ) ಎಂಬ ಕಾಯ್ದೆ ಇದಾಗಲಿದೆ. ತುರ್ತು ಪರಿಸ್ಥಿತಿ ಹೇರಿದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಟೀಕಿಸಿದರು.
ಮಧ್ಯಪ್ರವೇಶ ಮಾಡಿದ ಬಿಜೆಪಿ ಸದಸ್ಯ ಸುನೀಲ್ ಕುಮಾರ್, ಯಾವುದೇ ಗ್ರಂಥಗಳಲ್ಲಿ ಇರುವ ದ್ವೇಷದ ಮಾತುಗಳನ್ನು ಉಲ್ಲೇಖಿಸಿದರೆ ಅದಕ್ಕೂ ಈ ಕಾಯ್ದೆ ಅನ್ವಯವಾಗಲಿದೆಯೇ? ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಹೌದು ಅದಕ್ಕೂ ಅನ್ವಯ ಆಗುತ್ತದೆ ಎಂದರು. ಮುಂದಾಲೋಚನೆ ಮಾಡದೆ ಈ ವಿಧೇಯಕವನ್ನು ಜಾರಿಗೆ ತರುತ್ತಿದ್ದೀರಾ, ಇದು ಬಹಳ ದೊಡ್ಡ ಅಪಾಯದ ಸೂಚನೆಯಾಗಿದೆ ಎಂದು ಸುನೀಲ್ ಕುಮಾರ್ ಹೇಳಿದರು.
ನಂತರ ಮಾತು ಮುಂದುವರೆಸಿದ ಅಶೋಕ್, ರಾಜಕೀಯ ದ್ವೇಷ ಸಾಧಿಸಲು ‘ಬ್ರಹ್ಮಾಸ್ತ್ರ’ದಂತೆ ಈ ಕಾಯ್ದೆ ಬಳಕೆಯಾಗಲಿದೆ. ಇದು ಮತ ಬ್ಯಾಂಕ್ ರಾಜಕಾರಣದ ಉದ್ದೇಶ ಹೊಂದಿದೆ. ಅಧಿಕಾರಕ್ಕೆ ಬಂದವರು ವಿಪಕ್ಷಗಳನ್ನು ಹಣಿಯಲು ಅಸ್ತ್ರದಂತೆ ಇದನ್ನು ಬಳಸಿಕೊಳ್ಳಲಿದ್ದಾರೆ. ಇವತ್ತು ನೀವು ಅಧಿಕಾರದಲ್ಲಿದ್ದೀರಿ, ನಾಳೆ ನಾವು ಅಧಿಕಾರಕ್ಕೆ ಬಂದರೆ ಈ ಕಾನೂನು ನಿಮಗೆ ತಿರುಗು ಬಾಣವಾಗಬಹುದು. ಕಾನೂನು ತರುವ ಮುಂಚೆ ಯೋಚಿಸಬೇಕಿತ್ತು ಎಂದು ಹೇಳಿದರು.
ಅಶೋಕ್ ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ದ್ವೇಷ ಭಾಷಣ ಮಾಡುವ ಮೂಲಕ ಪ್ರಚೋದನೆ ಮಾಡುವವರಿಗೆ ಕಡಿವಾಣ ಹಾಕಲು ಈ ವಿಧೇಯಕವನ್ನು ತರಲಾಗಿದೆ. ನೀವು ಯಾಕೆ ಬಾಯಿ ಬಡಿದುಕೊಳ್ಳುತ್ತೀರಾ ಎಂದು ಕಿಚಾಯಿಸಿದರು. ಈ ವೇಳೆ ಬಿಜೆಪಿ ಸದಸ್ಯರು ಸಂತೋಷ್ ಲಾಡ್ ವಿರುದ್ಧ ತಿರುಗಿಬಿದ್ದರು. ಆಗ ಎದ್ದು ನಿಂತ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಕರಾವಳಿಯಲ್ಲಿ ದ್ವೇಷ ಭಾಷಣಗಳನ್ನುಮಾಡಿ ಬೆಂಕಿ ಹಾಕಿದವರು, ಇಲ್ಲಿಯೂ ಬಂದು ಬೆಂಕಿ ಹಾಕಬೇಡಿ ಎಂದರು. ಇದು ಬಿಜೆಪಿ ಶಾಸಕರನ್ನು ಮತ್ತಷ್ಟು ಕೆರಳಿಸಿತು.
ಬಿಜೆಪಿ ಸದಸ್ಯರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ, ಡಾ.ಭರತ್ ಶೆಟ್ಟಿ, ಸುನೀಲ್ ಕುಮಾರ್ ಸೇರಿದಂತೆ ಇನ್ನಿತರರು ಸಚಿವರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ಕರಾವಳಿಗೆ ಬೆಂಕಿ ಹಾಕಿದವರು ಯಾರು? ಕರಾವಳಿಗೆ ಬೆಂಕಿ ಬಿದ್ದಿದೆಯೇ? ಸಚಿವರು ಕರಾವಳಿಯನ್ನು ಅಪಮಾನ ಮಾಡಿದ್ದಾರೆ ಎಂದು ಕಿಡಿಗಾರಿದರು. ಒಂದು ಹಂತದಲ್ಲಿ ಏರು ಧ್ವನಿಯಲ್ಲಿ ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸುನೀಲ್ ಕುಮಾರ್, ನೀವು(ಸ್ಪೀಕರ್) ಕರಾವಳಿ ಭಾಗದವರಾಗಿ ಇದನ್ನು ಕೇಳಿಸಿಕೊಂಡು ಸುಮ್ಮನೆ ಕುಳಿತಿದ್ದೀರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಸಚಿವ ಬೈರತಿ ಸುರೇಶ್, ಸದನದಲ್ಲಿ ಏನೆ ವಿಚಾರಗಳು ಚರ್ಚೆ ನಡೆದರೂ ಈ ಐವರು(ಕರಾವಳಿ ಭಾಗದ ಬಿಜೆಪಿ ಸದಸ್ಯರು) ಎದ್ದು ನಿಂತು ಮಾತನಾಡಲು ಪ್ರಾರಂಭಿಸುತ್ತಾರೆ ಎಂದರು. ಆಗ, ಬಿಜೆಪಿ ಸದಸ್ಯ ಚನ್ನಬಸಪ್ಪ ಸಚಿವರ ವಿರುದ್ಧ ಕಿಡಿಗಾರಿದರು. ಒಂದು ಹಂತದಲ್ಲಿ ಚನ್ನಬಸಪ್ಪ ಹಾಗೂ ಬೈರತಿ ಸುರೇಶ್ ಪರಸ್ಪರ ಏಕವಚನದಲ್ಲೆ ವಾಕ್ಸಮರ ನಡೆಸಿದರು.
ಸಚಿವರು ನೀಡಿರುವ ಹೇಳಿಕೆಯನ್ನು ಕಡತದಿಂದ ತೆಗೆದು ಹಾಕುವುದಾಗಿ ಸ್ಪೀಕರ್ ಹೇಳಿದರೂ, ಸಚಿವರು ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದು ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಇದೇ ವೇಳೆ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕವನ್ನು ಸ್ಪೀಕರ್ ಪರ್ಯಾಲೋಚನೆಗೆ ತೆಗೆದುಕೊಂಡು ಅಂಗೀಕಾರ ಪ್ರಸ್ತಾವನೆ ಮಂಡಿಸಿ, ವಿಧೇಯಕಕ್ಕೆ ಒಪ್ಪಿಗೆ ಸಿಕ್ಕಿರುವುದಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ವಿಧೇಯಕದ ಪ್ರತಿಯನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸ್ಪೀಕರ್ ಸದನವನ್ನು ಭೋಜನಾ ವಿರಾಮಕ್ಕೆ ಮುಂದೂಡಿದರು.







