ಮಹಾರಾಷ್ಟ್ರ: ಪ್ರವಾಸಕ್ಕೆ ತೆರಳಿದ್ದ ಬೆಳಗಾವಿಯ ಒಂದೇ ಕುಟುಂಬದ 7 ಮಂದಿ ನೀರುಪಾಲು

ಬೆಳಗಾವಿ: ದಸರಾ ರಜೆ ಹಿನ್ನೆಲೆ ಮಹಾರಾಷ್ಟ್ರಕ್ಕೆ ಪ್ರವಾಸ ಹೋಗಿದ್ದ ಬೆಳಗಾವಿಯ ಒಂದೇ ಕುಟುಂಬದ 7 ಮಂದಿ ನೀರುಪಾಲಾಗಿದ್ದು, ಮೂವರ ಮೃತದೇಹ ಪತ್ತೆಯಾಗಿದೆ.
ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಸೀರೋಡಾ ಸಮುದ್ರ ತೀರದಲ್ಲಿ ಘಟನೆ ನಡೆದಿದೆ.
ಖಾನಾಪುರ ತಾಲ್ಲೂಕಿನ ಲೋಂಡಾ ಗ್ರಾಮದ ಕುಟುಂಬವೊಂದು ದಸರಾ ರಜೆ ಹಿನ್ನೆಲೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಸೀರೋಡಾ ಸಮುದ್ರ ತೀರಕ್ಕೆ ತೆರಳಿದ್ದರು. ಕುಟುಂಬವು ನೀರಿಗೆ ಇಳಿದಿದ್ದು, ಈ ವೇಳೆ ಹಠಾತ್ ಬೃಹತ್ ಅಲೆಗಳು ಎಲ್ಲರನ್ನೂ ಕೊಚ್ಚಿಕೊಂಡು ಹೋಗಿದೆ ಎನ್ನಲಾಗಿದೆ.
ಘಟನೆಯಲ್ಲಿ ಇಸ್ರಾರ್ ಕಿತ್ತೂರ (17), ಇಬಾದ್ ಕಿತ್ತೂರ (13) ಹಾಗೂ ನಮೀರಾ ಅಕ್ತರ್ (16) ಎಂಬವರು ಮೃತಪಟ್ಟಿದ್ದಾರೆ. ಇರ್ಫಾನ್ ಕಿತ್ತೂರ (36), ಇಕ್ವಾನ್ ಕಿತ್ತೂರ (15), ಪರಯಾನ್ ಮನಿಯರ್ (20) ಹಾಗೂ ಜಾಕಿರ್ ಮನಿಯರ್ (13) ಎಂಬವರು ನಾಪತ್ತೆಯಾಗಿದ್ದಾರೆ. ಪ್ರಹಾನಾ ಕಿತ್ತೂರ (34) ಎಂಬ ಮಹಿಳೆಯನ್ನು ರಕ್ಷಿಸಲಾಗಿದ್ದು, ಅವರನ್ನು ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಪತ್ತೆಯಾದವರ ಪತ್ತೆಗೆ ಮಹಾರಾಷ್ಟ್ರ ಅಗ್ನಿಶಾಮಕ ಪಡೆ ಮತ್ತು ಪೊಲೀಸರ ತಂಡಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.







