Belagavi | ನಾಳೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ : ವಿಜಯೇಂದ್ರ

ಬೆಳಗಾವಿ : ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಗಂಭೀರ ಚರ್ಚೆ ನಡೆಯಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿ.ವೈ.ವಿಜಯೇಂದ್ರ ಅವರು ರಾಜ್ಯ ಸರಕಾರದ ಕಾರ್ಯವೈಖರಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ರೈತರ ಸಮಸ್ಯೆಗಳ ಬಗ್ಗೆ ರಾಜ್ಯ ಸರಕಾರ ಸಂಪೂರ್ಣ ನಿರ್ಲಕ್ಷ್ಯ ತೋರಿಸುತ್ತಿದೆ ಎಂದು ಆರೋಪಿಸಿದ ವಿಜಯೇಂದ್ರ, ಎಲ್ಲಾ ವಿಷಯಕ್ಕೂ ಕೇಂದ್ರ ಸರಕಾರದ ಮೇಲೆ ಬೊಟ್ಟು ಮಾಡಿ ತೋರಿಸುವುದೇ ಈ ಸರಕಾರದ ಕೆಲಸವಾಗಿದೆ. ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಈ ಸರಕಾರ ನಿರುದ್ಯೋಗ, ನೀರಾವರಿ, ನೇಕಾರರ ಹಾಗೂ ರೈತರ ಪ್ರಶ್ನೆಗಳಲ್ಲಿ ಯಾವುದೇ ಪರಿಹಾರ ನೀಡಿಲ್ಲ ಎಂದು ಟೀಕಿಸಿದರು.
ಸಿಎಂ–ಡಿಸಿಎಂ ದೆಹಲಿಗೆ ಪದೇ ಪದೇ ತೆರಳುತ್ತಿರುವುದು ಆಂತರಿಕ ಕಚ್ಚಾಟದ ಪರಿಣಾಮ ಎಂದು ಅವರು ಆರೋಪಿಸಿದರು. “ಈ ಗೊಂದಲದಲ್ಲಿ ರೈತರ ಸಮಸ್ಯೆಗಳಿಗೆ ಸರಕಾರ ಪರಿಹಾರ ಕೊಡಲು ವಿಫಲವಾಗಿದೆ,” ಎಂದು ಅವರು ಹೇಳಿದರು.
ಸುವರ್ಣಸೌಧಕ್ಕೆ ಮುತ್ತಿಗೆ :
ನಾಳೆ ರೈತರೊಂದಿಗೆ ಸೇರಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವುದಾಗಿ ವಿಜಯೇಂದ್ರ ಘೋಷಿಸಿದರು. “ರಾಜ್ಯದ ಎಲ್ಲಾ ಸಮಸ್ಯೆಗಳ ಕುರಿತು ಸದನದಲ್ಲಿ ಕಠಿಣ ಚರ್ಚೆ ಮಾಡುತ್ತೇವೆ” ಎಂದು ಅವರು ಸ್ಪಷ್ಟಪಡಿಸಿದರು.





