ಮೈಸೂರು ರಾಜವಂಶಸ್ಥರಿಗೆ ನೀಡಬೇಕಾದ ಗೌರವ ನೀಡಿದ್ದೇವೆ: ಸಿಎಂ ಡಿ.ಕೆ. ಶಿವಕುಮಾರ್

ಡಿ.ಕೆ.ಶಿವಕುಮಾರ್
ಬೆಳಗಾವಿ: ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ರಾಜವಂಶಸ್ಥರಿಗೆ ನೀಡಬೇಕಾದ ಗೌರವವನ್ನು ಸರಕಾರದಿಂದ ನೀಡಲಾಗಿದೆ. ದಸರಾ ಆಯೋಜನೆಯಲ್ಲಿ ನಮ್ಮ ಕಡೆಯಿಂದ ಏನಾದರೂ ತಪ್ಪಾಗಿದ್ದರೆ ಅದನ್ನು ತಿದ್ದಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮೈಸೂರು ದಸರಾ ಮಹೋತ್ಸವದ ಆಯೋಜನೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಕಂಡುಬಂದಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ ಕುರಿತು, ನಗರದಲ್ಲಿ ಮಂಗಳವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಪ್ರಮೋದಾದೇವಿ ಹೇಳಿಕೆಯನ್ನು ತಾನು ಇನ್ನೂ ಗಮನಿಸಿಲ್ಲ. ಮೈಸೂರಿನಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪರಂಪರೆಯನ್ನೇ ಮುಂದುವರಿಸಲಾಗಿದೆ. ಹೊಸ ಆನೆ ಪ್ರಶಾಂತ ಮೇಲೆ ಜಂಬೂ ಸವಾರಿ ನಡೆಸಲಾಗಿದೆ. ಆದರೂ, ಅವರ ಹೇಳಿಕೆಯನ್ನು ಗಮನಿಸಿ ಚರ್ಚಿಸಲಾಗುವುದು. ಇದು ವೈಯಕ್ತಿಕ ವಿಚಾರವಲ್ಲ, ಇಡೀ ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂದು ತಿಳಿಸಿದರು.
ಮೈಸೂರು ದಸರಾ ನಾಡಿನ ಹಬ್ಬವಾಗಿದ್ದು, ನಾಡದೇವತೆಗೆ ಗೌರವ ಸಲ್ಲಿಸಲಾಗಿದೆ. ಕೊಪ್ಪಳದ ಶ್ರೀಗಳು ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಇದು ಸರಕಾರದ ಕಾರ್ಯಕ್ರಮವೇ ಹೊರತು, ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ಕಾರ್ಯಕ್ರಮವಲ್ಲ ಎಂದು ಸ್ಪಷ್ಟಪಡಿಸಿದರು.
ದಸರಾ ಮಹೋತ್ಸವದ ಯಶಸ್ವಿ ಆಯೋಜನೆಗಾಗಿ ಪ್ರತೀ ಸಚಿವರಿಗೂ ಒಂದೊಂದು ಜವಾಬ್ದಾರಿ ವಹಿಸಲಾಗಿತ್ತು. ಎಲ್ಲರೂ ತಮಗೆ ನೀಡಿದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಹಿಂದಿನಿಂದ ನಡೆದುಕೊಂಡು ಬಂದ ಪರಂಪರೆಯಂತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಹಿಂದಿನ ಇತಿಹಾಸದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ನಮ್ಮ ಕಡೆಯಿಂದ ಯಾವುದಾದರೂ ಲೋಪವಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.






