ಎಲ್ಲ ಸರಕಾರದಲ್ಲೂ ಸಿಎಂ ಬದಲಾವಣೆ ಮಾತುಗಳು ಸಾಮಾನ್ಯ : ಯತೀಂದ್ರ ಸಿದ್ದರಾಮಯ್ಯ

ಬೆಳಗಾವಿ : “ಯಾವುದೇ ಸರಕಾರ ಇದ್ದರೂ ಸಿಎಂ ಬದಲಾವಣೆ ಬಗ್ಗೆ ಮಾತುಗಳು ಕೇಳಿಬರುತ್ತಲೇ ಇರುತ್ತವೆ. ನಮ್ಮ ಸರಕಾರವೂ ಅದಕ್ಕೆ ಹೊರತಾಗಿಲ್ಲ. ಬಿಜೆಪಿ ಸರಕಾರದಲ್ಲೂ ಮುಖ್ಯಮಂತ್ರಿಗಳ ಬದಲಾವಣೆ ಆಗಿದೆ. ಎಲ್ಲ ಸರಕಾರದಲ್ಲೂ ಸಿಎಂ ಆಕಾಂಕ್ಷಿಗಳು ಇರುತ್ತಾರೆ” ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಬೈಲಹೊಂಗಲ ತಾಲೂಕಿನ ನಯಾನಗರದ ಸುಖದೇವಾನಂದ ಆಶ್ರಮದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮುಂದಿನ ಐದು ವರ್ಷಗಳ ಕಾಲ ಆಡಳಿತ ಮುಂದುವರಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, “ಅದು ನಮ್ಮ ವೈಯಕ್ತಿಕ ಬೇಡಿಕೆ. ರಾಜ್ಯದ ಜನರಿಗೆ ಒಳ್ಳೆಯದಾಗಬೇಕು ಎನ್ನುವುದೇ ಮುಖ್ಯ. ಐದು ವರ್ಷ ಪೂರೈಸುವ ಬಗ್ಗೆ ಸಿಎಂ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಹೆಚ್ಚಿನ ಮಾತಿಲ್ಲ” ಎಂದರು.
ಕಾಂಗ್ರೆಸ್ ಪಕ್ಷದೊಳಗಿನ ಗೊಂದಲ ಕುರಿತು ಲಕ್ಷ್ಮಣ ಸವದಿ ಹಾಗೂ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಗೊಂದಲ ಪರಿಹರಿಸಲು ಮನವಿ ಮಾಡಿದ್ದಾರೆ. ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಂಡು ಸಮಸ್ಯೆ ನಿವಾರಣೆ ಮಾಡುತ್ತದೆ. ಅದನ್ನು ನಾವು ಅನುಸರಿಸುತ್ತೇವೆ,” ಎಂದು ಹೇಳಿದರು.
ಸಚಿವ ಸಂಪುಟ ಪುನರ್ ರಚನೆ ಕುರಿತು ಮಾತನಾಡಿದ ಅವರು, “ಪ್ರತಿ ಸರಕಾರದಲ್ಲೂ ಅರ್ಧ ಅವಧಿ ಬಳಿಕ ಸಂಪುಟ ಪುನರ್ ರಚನೆ ಆಗುವುದು ಸಾಮಾನ್ಯ. ಶಾಸಕರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಅಂತಿಮ ನಿರ್ಧಾರ ಪಕ್ಷದ ವರಿಷ್ಠರದ್ದು,” ಎಂದು ಸ್ಪಷ್ಟಪಡಿಸಿದರು.
ತಮ್ಮನ್ನು ಸಚಿವರಾಗಿ ನೋಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ತಂದೆ ಮುಖ್ಯಮಂತ್ರಿ ಇರುವವರೆಗೂ ನಾನು ಸಚಿವ ಸ್ಥಾನಕ್ಕೆ ಆಕಾಂಕ್ಷಿ ಅಲ್ಲ. ನನಗಿಂತ ಅರ್ಹರು, ಅನುಭವಿಗಳಾದ ಹಿರಿಯರಿಗೆ ಅವಕಾಶ ಸಿಗಬೇಕು” ಎಂದು ಹೇಳಿದರು.
ಹೊಸ ಶಾಸಕರು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿರುವ ಕುರಿತು ಪ್ರತಿಕ್ರಿಯಿಸಿ, “ಯಾವುದೇ ಸಂಪುಟದಲ್ಲೂ ಹೊಸಬರು ಹಾಗೂ ಅನುಭವಿಗಳ ಸಮನ್ವಯ ಇರುತ್ತದೆ. ಈ ಬಾರಿಯೂ ಅದೇ ರೀತಿಯಲ್ಲಿ ನಡೆಯುತ್ತದೆ” ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿ, “ಅದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ” ಎಂದರು.
ಬಾಗಲಕೋಟೆ ಹಾಗೂ ದಾವಣಗೆರೆ ಉಪಚುನಾವಣೆ ಕುರಿತು ಮಾತನಾಡಿದ ಅವರು, “ಎಲ್ಲೆಡೆ ಉತ್ತಮ ವಾತಾವರಣ ಇದೆ. ಬಾಗಲಕೋಟೆಯಲ್ಲಿ ನಾವು ಖಚಿತವಾಗಿ ಗೆಲ್ಲುತ್ತೇವೆ. ದಾವಣಗೆರೆಯಲ್ಲೂ ಉತ್ತಮ ವರದಿ ಬಂದಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಿಸಲ್ಟ್ ಮುನ್ನವೇ ಕ್ರಮ ಕೈಗೊಳ್ಳುವ ಕುರಿತು ಕೇಳಿದ ಪ್ರಶ್ನೆಗೆ, “ನನ್ನ ತಿಳುವಳಿಕೆಯ ಪ್ರಕಾರ ಎಲ್ಲರೂ ಒಟ್ಟಾಗಿ ಪ್ರಚಾರ ಮಾಡಿದ್ದಾರೆ. ಆದರೆ ವರಿಷ್ಠರಿಗೆ ಬಂದ ಮಾಹಿತಿಯ ಆಧಾರದಲ್ಲಿ ನಿರ್ಧಾರ ತೆಗೆದುಕೊಂಡಿರಬಹುದು. ಇದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ” ಎಂದರು.
ಝಮೀರ್ ಅಹ್ಮದ್ ಖಾನ್ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, “ಝಮೀರ್ ನಮ್ಮ ಪಕ್ಷದ ಹಿರಿಯ ಮುಖಂಡರು. ಅವರು ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದಾರೆ ಎಂಬ ನಂಬಿಕೆ ಇದೆ,” ಎಂದು ಹೇಳಿದರು.






