ತಂಬ್ರಹಳ್ಳಿ 2ನೇ ಹಂತದ ಏತ ನೀರಾವರಿ ಯೋಜನೆ ಜಾರಿಗೆ ವೈ.ಎಂ. ಸತೀಶ್ ಆಗ್ರಹ

ಬೆಳಗಾವಿ/ಬಳ್ಳಾರಿ, ಡಿ. 11: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ 2ನೇ ಹಂತದ ಏತ ನೀರಾವರಿ ಯೋಜನೆಯ 1400 ಎಕರೆ ಭೂಮಿಗೆ ನೀರುಣಿಸಲು ಪುನರ್ ಸರ್ವೇ ಆಗಿದ್ದು ತ್ವರಿತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ವಿಜಯನಗರ - ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ವಿಧಾನಪರಿಷತ್ ಸದಸ್ಯರಾದ ವೈ.ಎಂ. ಸತೀಶ್ ಅವರು ಆಗ್ರಹಿಸಿದ್ದಾರೆ.
ಬೆಳಗಾವಿಯ `ಸುವರ್ಣ ಸೌಧ’ದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಬೋಸರಾಜು ಅವರಿಗೆ ಪ್ರಶ್ನೆ ಕೇಳಿರುವ ಶಾಸಕ ವೈ.ಎಂ. ಸತೀಶ್ ಅವರು, 1976ರಲ್ಲಿ ಪ್ರಾರಂಭವಾಗಿರುವ ತಂಬ್ರಹಳ್ಳಿ ಏತ ನೀರಾವರಿ ಯೋಜನೆ 3000 ಎಕರೆ ಭೂಮಿಗೆ ನೀರುಣಿಸುವ ಯೋಜನೆ ಆಗಿತ್ತು. ಆದರೆ, ಈವರೆಗೆ 1400 ಎಕರೆ ಭೂಮಿಗೆ ಈ ವರೆಗೆ ನೀರುಣಿಸುವ ಕೆಲಸ ಆಗಿಲ್ಲ. ಸರ್ಕಾರ ತಕ್ಷಣವೇ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆಗ, ಸಚಿವ ಎನ್.ಎಸ್. ಬೋಸರಾಜು ಅವರು, ತಂಬ್ರಹಳ್ಳಿ 2ನೇ ಹಂತದ ಏತ ನೀರಾವರಿ ಯೋಜನೆಯನ್ನು ಪುನರುಜ್ಜೀವನಗೊಳಿಸಲು ವಿಶೇಷ ಘಟಕ ಯೋಜನೆ ಅಡಿಯಲ್ಲಿ ರೂ. 2.5 ಕೋಟಿ ಹಾಗೂ ಏತ ನೀರಾವರಿ ಯೋಜನೆ ಅಡಿಯಲ್ಲಿ ರೂ. 1.75 ಅನುದಾನವನ್ನು ನೀಡಲಾಗಿದೆ. ಪ್ರಸ್ತುತ ಈ ಯೋಜನೆ ವ್ಯಾಪ್ತಿಯ 1400 ಎಕರೆ ಭೂಮಿಯಲ್ಲಿ ಮನೆಗಳು, ಎಪಿಎಂಸಿ ಇನ್ನಿತರೆ ಕಟ್ಟಡಗಳು ನಿರ್ಮಾಣ ಆಗಿರುವ ಕಾರಣ ನೀರಾವರಿ ಪ್ರದೇಶವು ಕಡಿಮೆಯಾಗಿದೆ. ಬಾಕಿ ನೀರುಣಿಸುವ ಪ್ರದೇಶದ ತಾಂತ್ರಿಕ ಹಾಗೂ ಇನ್ನಿತರೆ ವಿಷಯಗಳನ್ನು ಆಧರಿಸಿದ ಯೋಜನೆ ಪುನರ್ ರೂಪಿಸಲಾಗುತ್ತದೆ ಎಂದರು.
ಅಲ್ಲದೇ, ಈ ಯೋಜನೆಯ ವ್ಯಾಪ್ತಿಯಲ್ಲಿ ಶಿಗೇನಹಳ್ಳಿ 1, 2, ಮತ್ತು 3, ತಂಬ್ರಹಳ್ಳಿ, ತಂಬ್ರಹಳ್ಳಿ ಎಕ್ಸ್‍ಟೆನ್ಶನ್ ಪ್ರದೇಶ, ಕೃಷ್ಣಾಪುರ, ಚಿಲಗೋಡು ಇನ್ನಿತರೆ ಪ್ರದೇಶಗಳು ಸೇರಿವೆ. ಈ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತದೆ ಎಂಧು ಉತ್ತರಿಸಿದರು.
ಆಗ, ವೈ.ಎಂ. ಸತೀಶ್ ಅವರು, ಮೂರುವರೆ ವರ್ಷಗಳ ಹಿಂದೆ ಇದೇ ಪ್ರಶ್ನೆಗಳನ್ನು ಸದನದಲ್ಲಿ ಕೇಳಿದ್ದೆ. ಆಗ, ಸಚಿವರಾಗಿದ್ದ ಮಾಧುಸ್ವಾಮಿ ಅವರು, ಯೋಜನೆಯ ಪುನರ್ ಸರ್ವೇಗೆ ಆದೇಶ ನೀಡಿದ್ದರು. ಈ ಯೋಜನೆಯ ಪುನರ್ ಸರ್ವೇ ಪೂರ್ಣಗೊಂಡಿದೆ. ಕಾರಣ ತ್ವರಿತವಾಗಿ ಕಾಮಗಾರಿಯನ್ನು ಕೈಗೆತ್ತಿಕೊಂಡು ರೈತರಿಗೆ ನೆರವಾಗಿ. ಕೃಷಿ ಭೂಮಿಗೆ ನೀರುಣಿಸುವ ಕೆಲಸವಾಗಲಿ ಎಂದು ಅವರು ಕೋರಿದರು.
ಸಚಿವ ಎನ್.ಎಸ್. ಬೋಸರಾಜ್ ಅವರು, ಹಣದ ಖರ್ಚಿನ ಲೆಕ್ಕಾಚಾರ ಹಾಕಿ ಹೆಚ್ಚಿನ ಹಣದ ಅಗತ್ಯವಿದ್ದಲ್ಲಿ ಬಜೆಟ್‍ನಲ್ಲಿ ಈ ವಿಷಯವನ್ನು ಸೇರ್ಪಡೆ ಮಾಡಿ, ಅನುದಾನ ನೀಡಲಾಗುತ್ತದೆ ಎಂದು ಉತ್ತರಿಸಿದರು.







