ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರದ ಬಾಣಂತಿಯರ ವಾರ್ಡ್ ಗೆ ಬಂತು ಹೊಸ ಯುಪಿಎಸ್, ಇನ್ವರ್ಟರ್

ಬಳ್ಳಾರಿ: ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯದಿಂದ ಬಾಣಂತಿಯರು ಹಾಗೂ ಹಸುಗೂಸುಗಳು ಎದುರಿಸುತ್ತಿದ್ದ ಸಮಸ್ಯೆಗೆ ಕೊನೆಗೂ ಸ್ಪಂದನ ದೊರೆತಿದೆ. ಈ ಕುರಿತು ಅ. 9ರಂದು ‘ವಾರ್ತಾಭಾರತಿ’ ಪತ್ರಿಕೆಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಆರೋಗ್ಯ ಇಲಾಖೆ ಬಾಣಂತಿಯರು ಹಾಗೂ ನವಜಾತ ಶಿಶುಗಳ ವಾರ್ಡ್ಗೆ ಹೊಸ ಯುಪಿಎಸ್ ಮತ್ತು ಇನ್ವರ್ಟರ್ ವ್ಯವಸ್ಥೆ ಕಲ್ಪಿಸಿದೆ.
ಆಸ್ಪತ್ರೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾದಾಗ ಬಾಣಂತಿಯರು ಹಾಗೂ ಹಸುಗೂಸುಗಳು ತೊಂದರೆ ಅನುಭವಿಸುತ್ತಿರುವ ಗಂಭೀರ ವಿಚಾರವನ್ನು ‘ವಾರ್ತಾಭಾರತಿ’ ವರದಿ ಮೂಲಕ ಬೆಳಕಿಗೆ ತಂದಿತ್ತು. ವರದಿಯ ಬೆನ್ನಲ್ಲೇ ತಾಲೂಕು ಆರೋಗ್ಯಾಧಿಕಾರಿ ಡಾ. ಬಸವರಾಜ ದಮ್ಮೂರು ಆಸ್ಪತ್ರೆಯ ಬಾಣಂತಿಯರ ವಾರ್ಡ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ವಾರ್ಡ್ ಗಳಿಗೆ ಪ್ರತ್ಯೇಕ ಯುಪಿಎಸ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ್ದರು.
ಅಧಿಕಾರಿಗಳ ಸೂಚನೆಯಂತೆ ಶನಿವಾರ ಹೊಸ ಯುಪಿಎಸ್ ಹಾಗೂ ಇನ್ವರ್ಟರ್ ಅಳವಡಿಸಲಾಗಿದೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರಾಮಕೃಷ್ಣ ತಿಳಿಸಿದ್ದಾರೆ.




