ಸಂಡೂರು ಕ್ಷೇತ್ರದಲ್ಲಿ 11.12 ಕೋಟಿ ವೆಚ್ಚದ 21 ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಬಳ್ಳಾರಿ : ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಇಲಾಖೆಗಳ ಅನುದಾನದಡಿ ಒಟ್ಟು 11.12 ಕೋಟಿ ವೆಚ್ಚದ 21 ಅಭಿವೃದ್ಧಿ ಕಾಮಗಾರಿಗಳಿಗೆ ಕ್ಷೇತ್ರದ ಶಾಸಕಿ ಅನ್ನಪೂರ್ಣ ಈ. ತುಕಾರಾಂ ಅವರು ಮಂಗಳವಾರ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಸಾರ್ವಜನಿಕ ಕಾಮಗಾರಿಗಳ ಇಲಾಖೆ (PWD), ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ (PRED), ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (KRIDL) ಹಾಗೂ ಎನ್‌ಎಂಡಿಸಿ (NMDC) ಸಹಯೋಗದಲ್ಲಿ ರಸ್ತೆ, ಸಿ.ಸಿ. ರಸ್ತೆ, ಒಳಚರಂಡಿ, ಶಾಲಾ ಕೊಠಡಿಗಳು, ಗ್ರಾಮ ಪಂಚಾಯಿತಿ ಕಟ್ಟಡ, ಬಸ್ ನಿಲ್ದಾಣ, ಪ್ರವಾಸಿ ಮಂದಿರ, ಆರೋಗ್ಯ ಸಿಬ್ಬಂದಿ ವಸತಿ ನಿಲಯ, ಗೋದಾಮು, ಶಾದಿ ಮಹಲ್ ಹಾಗೂ ಹೈಮಾಸ್ಟ್ ಲೈಟ್ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಅಂಕಮ್ಮನಾಳ್ ಗ್ರಾಮದಲ್ಲಿ ಪರಿಶಿಷ್ಟ ಪಂಗಡ ಹಾಗೂ ಎಸ್.ಟಿ. ಕಾಲೋನಿಗಳಲ್ಲಿ ಸಿ.ಸಿ. ರಸ್ತೆ ಮತ್ತು ಒಳಚರಂಡಿ ನಿರ್ಮಾಣ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ನೂತನ ಬಸ್ ನಿಲ್ದಾಣವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಯಿತು.
ಹೀರಾಳ್ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಎರಡು ನೂತನ ಶಾಲಾ ಕೊಠಡಿಗಳ ಉದ್ಘಾಟನೆ ನಡೆಯಿತು. ಹೀರಾಳ್–ಬಂಡ್ರಿ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೂ ಭೂಮಿಪೂಜೆ ನೆರವೇರಿಸಲಾಯಿತು.
ಕಾಳಿಂಗೇರಿ ಗ್ರಾಮದಲ್ಲಿ ಅಕ್ಷರ ಅವಿಷ್ಕಾರ ಯೋಜನೆಯಡಿ ಎರಡು ಶಾಲಾ ಕೊಠಡಿಗಳ ನಿರ್ಮಾಣ, ನೂತನ ಗ್ರಾಮ ಪಂಚಾಯಿತಿ ಕಟ್ಟಡ, ಕಾಳಿಂಗೇರಿ–ಎಂ.ಡಿ.ಆರ್. ರಸ್ತೆ ಅಭಿವೃದ್ಧಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಹೈಮಾಸ್ಟ್ ಲೈಟ್ ಅಳವಡಿಕೆ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಸೋವೆನಹಳ್ಳಿ ಗ್ರಾಮದಲ್ಲಿ ಎಸ್.ಸಿ. ಕಾಲೋನಿಯ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಹಾಗೂ ನಾಲ್ಕು ಹೈಮಾಸ್ಟ್ ಲೈಟ್ ಅಳವಡಿಕೆಗೆ ಭೂಮಿಪೂಜೆ ನೆರವೇರಿತು. ಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲೂ ಹೈಮಾಸ್ಟ್ ಲೈಟ್ ಅಳವಡಿಕೆ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ವಡೇರಹಳ್ಳಿ ಗ್ರಾಮದಲ್ಲಿ ಸಿ.ಸಿ. ರಸ್ತೆ ಹಾಗೂ ಡ್ರೈನೇಜ್ ನಿರ್ಮಾಣ ಮತ್ತು ಸರಕಾರಿ ಶಾಲೆಗೆ ಎರಡು ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಚೋರನೂರು ಗ್ರಾಮದಲ್ಲಿ ಪ್ರವಾಸಿ ಮಂದಿರ ನಿರ್ಮಾಣ, ಗೋದಾಮು ಉದ್ಘಾಟನೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವಸತಿ ನಿಲಯ ನಿರ್ಮಾಣ, ಶಾದಿ ಮಹಲ್ ನಿರ್ಮಾಣ, ವಿವಿಧ ಗ್ರಾಮಗಳಲ್ಲಿ ಹೈಮಾಸ್ಟ್ ಲೈಟ್ ಅಳವಡಿಕೆ, ಸುಡುಗಾಡು ಸಿದ್ದರ ಹೊಸ ಕಾಲೋನಿಯಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ ಹಾಗೂ ಹೊಸೂರು ರಸ್ತೆಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಅನ್ನಪೂರ್ಣ ಈ. ತುಕಾರಾಂ, ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸರಕಾರ ವಿಶೇಷ ಆದ್ಯತೆ ನೀಡಿದ್ದು, ರಸ್ತೆ, ಶಿಕ್ಷಣ, ಆರೋಗ್ಯ ಹಾಗೂ ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಗಳನ್ನು ಪ್ರತಿಯೊಂದು ಗ್ರಾಮಕ್ಕೂ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮಗಳಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.






