ರೈತರ ಪಂಪ್ಸೆಟ್ಗಳಿಗೆ ಸತತ 7 ಗಂಟೆ ವಿದ್ಯುತ್ : ಶಾಸಕ ಜೆ.ಎನ್.ಗಣೇಶ್ ಸ್ವಾಗತ

ಬಳ್ಳಾರಿ/ಕಂಪ್ಲಿ: ಕ್ಷೇತ್ರದ ಪಂಪ್ಸೆಟ್ಗಳ (ಐಪಿ ಸೆಟ್ಗಳ) ಆಧಾರಿತ ರೈತರಿಗೆ ಸತತ ಏಳು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡುವ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ನಿರ್ಧಾರ ಸ್ವಾಗತಾರ್ಹವಾಗಿದ್ದು, ಮಳೆಯಿಲ್ಲದೆ ಸಂಕಷ್ಟದಲ್ಲಿದ್ದ ಅನ್ನದಾತರಲ್ಲಿ ಹೊಸ ಆಶಾಕಿರಣ ಮೂಡಿಸಿದೆ ಎಂದು ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ್ ಹೇಳಿದ್ದಾರೆ.
ಪಟ್ಟಣದ ಶಾಸಕರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ರೈತರ ಐಪಿ ಸೆಟ್ಗಳಿಗೆ ದಿನಕ್ಕೆ ಕೇವಲ ಆರು ಗಂಟೆಗಳ ಕಾಲ ವಿದ್ಯುತ್ ಪೂರೈಸಲಾಗುತ್ತಿತ್ತು. ಆದರೆ, ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕ್ಷೇತ್ರದಲ್ಲಿ ತೀವ್ರ ನೀರಿನ ಅಭಾವ ಸೃಷ್ಟಿಯಾಗಿತ್ತು. ನೀರಿಲ್ಲದೆ ಬೆಳೆಗಳು ಒಣಗುವ ಸ್ಥಿತಿಗೆ ತಲುಪಿದ್ದರಿಂದ ರೈತರು ಆತಂಕಕ್ಕೊಳಗಾಗಿದ್ದರು. ಈ ಹಿನ್ನೆಲೆಯಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸಿ, ಸತತ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಸುವಂತೆ ಇಂಧನ ಸಚಿವರಿಗೆ ವಿಶೇಷ ಮನವಿ ಸಲ್ಲಿಸಿದ್ದಾಗಿ ತಿಳಿಸಿದರು.
ತಮ್ಮ ಮನವಿಗೆ ಸಚಿವರು ತಕ್ಷಣ ಸ್ಪಂದಿಸಿದ್ದು, ಶನಿವಾರ ಬೆಳಗ್ಗೆಯಿಂದಲೇ ರೈತರ ಪಂಪ್ಸೆಟ್ಗಳಿಗೆ ಸತತ ಏಳು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲು ಇಲಾಖೆಗೆ ಒಪ್ಪಿಗೆ ಸೂಚಿಸಿದ್ದಾರೆ. ಸರ್ಕಾರದ ಈ ತ್ವರಿತ ಕ್ರಮದಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದು ಹೇಳಿದರು.
ರೈತರು ಸಮೃದ್ಧಿಯಾಗಿದ್ದರೆ ಮಾತ್ರ ಇಡೀ ನಾಡು ಸಮೃದ್ಧಿಯಾಗಲು ಸಾಧ್ಯ. ಮುಂಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ ಎಂದು ಶಾಸಕ ಜೆ.ಎನ್. ಗಣೇಶ್ ಆಶಯ ವ್ಯಕ್ತಪಡಿಸಿದರು.




