Aland | ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಆಳಂದ : ಆಳಂದ–ಭೂಸನೂರ ತಾಂಡಾ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್ ಬುಧವಾರ ಸಂಜೆ ರಾಜೋಳ ಗ್ರಾಮದ ಸಮೀಪ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಆಳಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಸ್‌ನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದು, ಅಪಘಾತ ಸಂಭವಿಸುತ್ತಿದ್ದಂತೆಯೇ ಬಸ್‌ನೊಳಗೆ ಚೀರಾಟ-ಆಕ್ರಂದನ ಕೇಳಿಬಂದಿತು. ಕೆಲವರು ಬಸ್‌ನೊಳಗೆ ಸಿಲುಕಿಕೊಂಡಿದ್ದು, ಸ್ಥಳೀಯ ಗ್ರಾಮಸ್ಥರು ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆದರು.
ಗಾಯಾಳುಗಳಲ್ಲಿ ದೀಸಾ ವಿಲಾಸ್ ಚವ್ಹಾಣ (18), ಚಪಳಾಬಾಯಿ ವಿಠ್ಠು ರಾಠೋಡ (60), ಮಹಾದಣ ಫುಲಚಂದ ಪವಾರ (10), ಆರ್ಯನ್ ಜೇಮಸಿಂಗ್ ರಾಠೋಡ, ಅಂಜಲಿ ವಿಜಯಸಿಂಗ್ ರಾಠೋಡ (16), ನಂದಿನಿ ಪ್ರಕಾಶ್ ರಾಠೋಡ ಹಾಗೂ ಮಹಮ್ಮದ್ ಹುಸೇನ್ ಸಲೀಂ ಅಂಬೇವಾಡ (7) ಸೇರಿದಂತೆ ಹಲವರು ಸೇರಿದ್ದಾರೆ. ಇನ್ನೂ ಕೆಲವರ ಹೆಸರುಗಳು ತಿಳಿದುಬಂದಿಲ್ಲ.
108 ಆಂಬುಲೆನ್ಸ್ ವಿಳಂಬಕ್ಕೆ ಸಾರ್ವಜನಿಕರ ಆಕ್ರೋಶ :
ಅಪಘಾತ ಸಂಭವಿಸಿದ ತಕ್ಷಣ 108 ತುರ್ತು ಸೇವೆಗೆ ಕರೆ ಮಾಡಿದರೂ ಸುಮಾರು ಎರಡು ಗಂಟೆಗಳ ಕಾಲ ಆಂಬುಲೆನ್ಸ್ ಸ್ಥಳಕ್ಕೆ ಆಗಮಿಸಲಿಲ್ಲ ಎಂದು ಸ್ಥಳೀಯರು ಹಾಗೂ ಸಾಮಾಜಿಕ ಕಾರ್ಯಕರ್ತ ರಾಠೋಡ ಆರೋಪಿಸಿದ್ದಾರೆ. ತುರ್ತು ವೈದ್ಯಕೀಯ ಸೇವೆ ವಿಳಂಬವಾದ ಹಿನ್ನೆಲೆಯಲ್ಲಿ ಗಾಯಾಳುಗಳನ್ನು ಖಾಸಗಿ ವಾಹನಗಳಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು.
ಚಾಲಕ-ನಿರ್ವಾಹಕ ಪರಾರಿ ಆರೋಪ :
ಅಪಘಾತದ ಬಳಿಕ ಬಸ್ ಚಾಲಕ ಮತ್ತು ನಿರ್ವಾಹಕರು ಸ್ಥಳದಿಂದ ತೆರಳಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಪ್ರಯಾಣಿಕರು ಮತ್ತು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಅಥವಾ ಬಸ್‌ನ ತಾಂತ್ರಿಕ ದೋಷವೇ ಕಾರಣ ಎಂಬುದು ತನಿಖೆಯಿಂದ ತಿಳಿಯಬೇಕಿದೆ.
ಸುದ್ದಿ ತಿಳಿಯುತ್ತಿದ್ದಂತೆ ಆಳಂದ ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.






