ವಿಬಿ-ಗ್ರಾಮ್ ಜಿ ಯೋಜನೆಗೆ ಸಿರುಗುಪ್ಪದಲ್ಲಿ ಆಟೋ ಜಾಗೃತಿ ಅಭಿಯಾನಕ್ಕೆ ಚಾಲನೆ

ಸಿರುಗುಪ್ಪ : ವಿಕಸಿತ ಭಾರತ–ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ) (VB-GRAM G) ಯೋಜನೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ತಾಲೂಕಿನ ದೇಶನೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಆಟೋ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಹಸಿರು ನಿಶಾನೆ ತೋರಿಸಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಒಂದು ಕುಟುಂಬಕ್ಕೆ ವರ್ಷಕ್ಕೆ 125 ದಿನಗಳ ಉದ್ಯೋಗ ನೀಡಲಾಗುತ್ತದೆ. ಮಹಿಳೆ-ಪುರುಷರಿಗೆ ಸಮಾನ ಕೂಲಿ ನೀಡಲಾಗುತ್ತಿದ್ದು, ಪ್ರಸ್ತುತ ದಿನಕ್ಕೆ 382 ರೂ. ನಿಗದಿಯಾಗಿದೆ. 125 ದಿನ ಕೆಲಸ ಮಾಡಿದರೆ ಒಂದು ಕುಟುಂಬಕ್ಕೆ 47,750 ರೂ. ಆದಾಯ ದೊರೆಯಲಿದೆ ಎಂದು ತಿಳಿಸಿದರು.
ಯೋಜನೆಯಡಿ 318 ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು, ಜಲ ಭದ್ರತೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಅಭಿವೃದ್ಧಿ ಹಾಗೂ ತೀವ್ರ ಹವಾಮಾನ ಪರಿಣಾಮಗಳ ಶಮನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಕೃಷಿ ಹಂಗಾಮಿನ ಉತ್ತುಂಗದ ಅವಧಿಯಲ್ಲಿ ಕಾರ್ಮಿಕರ ಲಭ್ಯತೆ ಕಾಪಾಡಲು 60 ದಿನಗಳ ವಿರಾಮ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಗ್ರಾಮೀಣ ಕೂಲಿಕಾರ್ಮಿಕರು ಯೋಜನೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಬಸವನಗಿಡ, ತಾಲೂಕು ಐಇಸಿ ಸಂಯೋಜಕ ಸುರೇಶ್ ಗೌಡ, ತಾಂತ್ರಿಕ ಸಂಯೋಜಕ ಪ್ರದೀಪ್ ಕುಮಾರ್, ತಾಂತ್ರಿಕ ಸಹಾಯಕ ಕಾವ್ಯ, ಬಿಎಫ್‌ಟಿ ದ್ಯಾವಣ್ಣ ನಾಯಕ, ಗ್ರಾಮ ಕಾಯಕ ಮಿತ್ರೆ ಲಲಿತಮ್ಮ, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಕಾಯಕ ಬಂಧುಗಳು ಉಪಸ್ಥಿತರಿದ್ದರು.






