Ballari | 187ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ

ಸಂಡೂರು/ಬಳ್ಳಾರಿ: ಛಾಯಾಗ್ರಹಣ ಎನ್ನುವುದು ಕೇವಲ ಕ್ಯಾಮೆರಾದಿಂದ ಚಿತ್ರ ಸೆರೆಹಿಡಿಯುವುದಲ್ಲ; ಸೂಕ್ತ ದೃಷ್ಟಿಕೋನ, ಸಮಯಪ್ರಜ್ಞೆ ಹಾಗೂ ನಿಖರತೆಯಿಂದ ಕ್ಷಣಗಳನ್ನು ಶಾಶ್ವತವಾಗಿಸುವ ಕಲೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ಸಂಡೂರು ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಘ (ರಿ.) ಆಶ್ರಯದಲ್ಲಿ ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ 187ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಛಾಯಾಗ್ರಾಹಕರ ವೃತ್ತಿಯ ಮಹತ್ವ ಹಾಗೂ ಅವರ ಪರಿಶ್ರಮವನ್ನು ಶ್ಲಾಘಿಸಿದರು.
ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಫಕೀರಡಿಂಗಾಲೇಶ್ವರ ಮಹಾಸ್ವಾಮಿಗಳು ಹಾಗೂ ಶ್ರೀ ಮ.ನಿ.ಪ್ರ. ಪ್ರಭುಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮವನ್ನು ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕಿ ಅನ್ನಪೂರ್ಣ ಈ. ತುಕಾರಾಮ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ. ಪಿ.ಎಸ್. ಹರ್ಷ, ಐಪಿಎಸ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು. ಸಂಡೂರು ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಘದ ತಾಲೂಕು ಅಧ್ಯಕ್ಷ ವಿನಯಕುಮಾರ ಸಾರಂಗಮಠ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಸಂಡೂರು ತಾಲೂಕು ಅಧ್ಯಕ್ಷ ಡಾ. ಬಿ. ನಾಗನಗೌಡ, ಕರ್ನಾಟಕ ಫೋಟೋಗ್ರಾಫರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಹೆಚ್.ಎಸ್. ನಾಗೇಶ್, ರಾಜ್ಯ ಕಾರ್ಯದರ್ಶಿ ನಾಗರಾಜ್, ಬಳ್ಳಾರಿ ಜಿಲ್ಲಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನಿಕಟಪೂರ್ವ ಜಿಲ್ಲಾಧ್ಯಕ್ಷ ನಾಡಗೌಡ ಚಂದ್ರಮೋಹನ್ ಹಾಗೂ ಕೆಎಫ್‌ಎ ಮಾಜಿ ನಿರ್ದೇಶಕ ಕೆ. ವೀರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳಿಗೆ ಸಮಯಪ್ರಜ್ಞೆ ಮತ್ತು ಗುರಿಯ ಪಾಠ :
ಕಾರ್ಯಕ್ರಮಕ್ಕೆ ಕೆಲ ಗಣ್ಯರು ತಡವಾಗಿ ಆಗಮಿಸಿದರೂ, ಶಾಲಾ-ಕಾಲೇಜು ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಆಗಮಿಸಿ ಕಾಯುತ್ತಿದ್ದುದನ್ನು ಉಲ್ಲೇಖಿಸಿದ ಸ್ವಾಮೀಜಿಗಳು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಸಮಯಪ್ರಜ್ಞೆ ಅತ್ಯಂತ ಮುಖ್ಯ ಎಂದು ಹೇಳಿದರು.
ಜೀವನದಲ್ಲಿ ದೊಡ್ಡ ಗುರಿಗಳನ್ನು ಹೊಂದಿ, ಅವುಗಳ ಸಾಧನೆಗಾಗಿ ದೃಢ ಸಂಕಲ್ಪದಿಂದ ಮುನ್ನಡೆಯಬೇಕು. ಐಪಿಎಸ್, ತಹಸೀಲ್ದಾರ್, ಬಿಇಒ, ಪಿಎಸ್‌ಐ ಸೇರಿದಂತೆ ಉನ್ನತ ಹುದ್ದೆಗಳನ್ನು ಪಡೆಯುವ ಕನಸು ಕಾಣಬೇಕು. ಆ ಕನಸುಗಳಿಗೆ ತಕ್ಕಂತೆ ಪರಿಶ್ರಮ ಮತ್ತು ಶಿಸ್ತನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಣ್ಣುಗಳೇ ಭಗವಂತ ನೀಡಿದ ಅತ್ಯುತ್ತಮ ಕ್ಯಾಮೆರಾ :
ಮಾನವನ ಕಣ್ಣುಗಳೇ ಭಗವಂತ ನೀಡಿರುವ ಅತ್ಯುತ್ತಮ ಕ್ಯಾಮೆರಾಗಳು ಎಂದು ಗಣ್ಯರು ಬಣ್ಣಿಸಿದರು. ದುಬಾರಿ ಕ್ಯಾಮೆರಾ ಹೊಂದಿರುವುದಷ್ಟೇ ಸಾಕಾಗುವುದಿಲ್ಲ; ಸರಿಯಾದ ಆಂಗಲ್, ಸೂಕ್ತ ದೃಷ್ಟಿಕೋನ, ಸಂದರ್ಭದ ಅರಿವು ಹಾಗೂ ನಿಖರತೆಯೇ ಉತ್ತಮ ಛಾಯಾಚಿತ್ರದ ಜೀವಾಳ ಎಂದು ಹೇಳಿದರು.
ಒಂದು ಚಿತ್ರ ಸಂತೋಷವನ್ನು ನೀಡಬಹುದು; ಅದೇ ಚಿತ್ರ ತಪ್ಪು ಸಂದರ್ಭ ಅಥವಾ ದೃಷ್ಟಿಕೋನದಿಂದ ಸಮಸ್ಯೆಗೂ ಕಾರಣವಾಗಬಹುದು. ಆದ್ದರಿಂದ ಛಾಯಾಗ್ರಾಹಕರು ತಮ್ಮ ವೃತ್ತಿಯಲ್ಲಿ ಹೆಚ್ಚಿನ ಜವಾಬ್ದಾರಿ ಮತ್ತು ವಿವೇಚನೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಬಾಲ್ಯ, ಯೌವನ ಹಾಗೂ ವೃದ್ಧಾಪ್ಯ ಎಂಬ ಜೀವನದ ಮೂರು ಪ್ರಮುಖ ಹಂತಗಳಲ್ಲಿ ಪ್ರತಿಯೊಬ್ಬರೂ ಉತ್ತಮ ನಡವಳಿಕೆ, ಸತ್ಕಾರ್ಯ ಹಾಗೂ ಸ್ಪಷ್ಟ ಗುರಿಯನ್ನು ಹೊಂದಿರಬೇಕು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಬಳ್ಳಾರಿಯ ಖ್ಯಾತ ನಿರೂಪಕ ವಿನೋದ್ ಎಂ. ಅಚ್ಚುಕಟ್ಟಾಗಿ ನಿರೂಪಿಸಿದರು. ಸಂಘದ ಪದಾಧಿಕಾರಿಗಳು, ಛಾಯಾಗ್ರಾಹಕರು, ವಿಡಿಯೋಗ್ರಾಫರ್‌ಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.






