Ballari | ಬಿಜೆಪಿಯಿಂದ ರಾಜಶೇಖರ್ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ

ಬಳ್ಳಾರಿ : ಮುಖ್ಯಮಂತ್ರಿಗಳು ರಾಜಶೇಖರ್ ಸಾವಿನ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ಚೆಲ್ಲಾಟ ಆಡದೇ ಸಮಗ್ರ ತನಿಖೆ ಮಾಡಿಸಬೇಕು. ಬಡ ಕುಟುಂಬಕ್ಕೆ ನ್ಯಾಯ ಸಿಗಲು ಸಿಬಿಐ ತನಿಖೆ ಮಾಡಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಇಂದು ಮೃತ ರಾಜಶೇಖರ್ ಅವರ ಮನೆಗೆ ಭೇಟಿ ನೀಡಿದಾಗ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರೇ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಅವರನ್ನು ಕೊಲೆ ಮಾಡಿದ್ದಾರೆ. ಅವರೇ ಗುಂಡು ಹಾರಿಸಿದ್ದರಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ನಾವು ಇವತ್ತು ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ- ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಜನಾರ್ಧನ ರೆಡ್ಡಿ, ಪ್ರಮುಖರು ಸೇರಿ ಕುಟುಂಬದವರನ್ನು ಭೇಟಿ ಮಾಡಿದ್ದೇವೆ. ಅವರ ತಾಯಿಯನ್ನೂ ಭೇಟಿ ಮಾಡಿದ್ದೇವೆ. ಅವರಿಗೆ 10 ಲಕ್ಷ ಪರಿಹಾರ ಕೊಟ್ಟಿದ್ದೇವೆ ಎಂದರು. ಆದರೆ, ಯಾವುದೇ ಪರಿಹಾರದಿಂದ ನ್ಯಾಯ ಕೊಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಬಿ.ಶ್ರೀರಾಮುಲು ಅವರು ಮಾತನಾಡಿ, ರಾಜಶೇಖರರ ಸಾವಿನ ಸಂದರ್ಭದಲ್ಲಿ ಅನೇಕ ಜನರಲ್ಲಿ ಗೊಂದಲ ಇತ್ತು. ಬಿಜೆಪಿಯವರಿಂದ ಕೊಲೆ ಆಗಿದೆ ಎಂದು ತಿಳಿಸುವ ಕೆಲಸ ಮಾಡಿದ್ದರು. ಈ ಕೊಲೆ ಕಾಂಗ್ರೆಸ್ಸಿನವರಿಂದಲೇ ಆಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದ ಎಲ್ಲ ವಿಡಿಯೋಗಳನ್ನು ನಾವು ಕೊಟ್ಟಿದ್ದೇವೆ ಎಂದು ತಿಳಿಸಿದರು.







