Ballari | ತಿಂಗಳಿಗೆ 15 ಸಾವಿರ ರೂ. ವೇತನ ಪಡೆಯುವ ಯುವಕನ ಹೆಸರಲ್ಲಿ 350 ಕೋಟಿ ರೂ. GST ವಂಚನೆ: ಸೈಬರ್ ಠಾಣೆಗೆ ದೂರು

ಸಾಂದರ್ಭಿಕ ಚಿತ್ರ | Photo credit : AI
ಬಳ್ಳಾರಿ: ತಿಂಗಳಿಗೆ ಕೇವಲ 15 ಸಾವಿರ ರೂ. ವೇತನ ಪಡೆಯುತ್ತಿರುವ ಯುವಕನೊಬ್ಬನ ವೈಯಕ್ತಿಕ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು 350 ಕೋಟಿ ರೂ. ಗೂ ಅಧಿಕ ಮೊತ್ತದ ಜಿಎಸ್ಟಿ ವಂಚನೆ ನಡೆಸಲಾಗಿದೆ ಎಂಬ ಆರೋಪ ಬಳ್ಳಾರಿಯಲ್ಲಿ ಕೇಳಿಬಂದಿದೆ.
ನಗರದ ಟೊಯೊಟಾ ಶೋರೂಂನಲ್ಲಿ ಸರ್ವಿಸ್ ಅಡ್ವೈಸರ್ ಆಗಿ ಕೆಲಸ ಮಾಡುತ್ತಿರುವ ರೋಷನ್ ವಂಚನೆಗೆ ಒಳಗಾದ ಯುವಕ ಎಂದು ತಿಳಿದುಬಂದಿದೆ.
ವಂಚಕರು ರೋಷನ್ ಅವರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಹಾಗೂ ಮನೆಯ ವಿದ್ಯುತ್ ಬಿಲ್ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ದಾಖಲೆಗಳನ್ನು ಬಳಸಿ, ಬೇರೆಯವರ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸ ನೀಡಿ ‘ರೋಷನ್ ಎಂಟರ್ಪ್ರೈಸಸ್’ ಹೆಸರಿನಲ್ಲಿ ಜಿಎಸ್ಟಿ ನೋಂದಣಿ ಮಾಡಿಸಲಾಗಿದೆ ಎನ್ನಲಾಗಿದೆ.
ಪ್ಲಾಸ್ಟಿಕ್ ವ್ಯಾಪಾರದ ಹೆಸರಿನಲ್ಲಿ ಕೇವಲ ಐದು ತಿಂಗಳ ಅವಧಿಯಲ್ಲಿ ಈ ಸಂಸ್ಥೆಯ ಮೂಲಕ 350 ಕೋಟಿ ರೂ. ಗೂ ಅಧಿಕ ಮೊತ್ತದ ವಹಿವಾಟು ನಡೆಸಿ, ಬಳಿಕ ಜಿಎಸ್ಟಿ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಧಿಕಾರಿಗಳ ಮನೆ ಭೇಟಿ ಬಳಿಕ ವಂಚನೆ ಬಯಲು :
ದೊಡ್ಡ ಮೊತ್ತದ ವಹಿವಾಟು ನಡೆದ ಬಳಿಕ ಜಿಎಸ್ಟಿ ಖಾತೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಜಿಎಸ್ಟಿ ಅಧಿಕಾರಿಗಳು ರೋಷನ್ ಅವರ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಕುಟುಂಬದವರಿಗೆ ಅಕ್ರಮ ವಹಿವಾಟಿನ ವಿಚಾರ ತಿಳಿದುಬಂದಿದೆ ಎಂದು ಹೇಳಲಾಗಿದೆ.
ಎಸಿ ಗೋಡೌನ್ನಲ್ಲಿ ಹಮಾಲಿ ಕೆಲಸ ಮಾಡುತ್ತಾ ದಿನಕ್ಕೆ 700 ರೂ. ಸಂಪಾದಿಸುವ ರೋಷನ್ ಅವರ ತಂದೆ ಫಕ್ರುದ್ದೀನ್ ಹಾಗೂ ಕುಟುಂಬದವರು ಅಧಿಕಾರಿಗಳ ವಿಚಾರಣೆಯಿಂದ ಆತಂಕಕ್ಕೊಳಗಾಗಿದ್ದಾರೆ ಎಂದು ತಿಳಿದುಬಂದಿದೆ.
ಕೆಲಸ ಮುಗಿಸಿ ಮನೆಗೆ ಬಂದ ರೋಷನ್ ಅವರಿಗೆ ವಿಷಯ ತಿಳಿದ ಬಳಿಕ ಜಿಎಸ್ಟಿ ಕಚೇರಿಗೆ ತೆರಳಿ ಈ ಕುರಿತು ಮಾಹಿತಿ ಕೇಳಿದ್ದಾರೆ ಎನ್ನಲಾಗಿದೆ. ಆದರೆ, ಅಲ್ಲಿ ಸಮರ್ಪಕ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಕುಟುಂಬದವರು ಬಳ್ಳಾರಿ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ತಮ್ಮ ಮಗನ ವೈಯಕ್ತಿಕ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ನೂರಾರು ಕೋಟಿ ರೂಪಾಯಿಗಳ ವಹಿವಾಟು ನಡೆಸಿರುವವರನ್ನು ಕೂಡಲೇ ಪತ್ತೆಹಚ್ಚಿ ಬಂಧಿಸಬೇಕು ಎಂದು ರೋಷನ್ ಅವರ ತಂದೆ ಫಕ್ರುದ್ದೀನ್ ಆಗ್ರಹಿಸಿದ್ದಾರೆ.
ರೋಷನ್ ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಬ್ಯಾಂಕ್ ಖಾತೆಗಳು ಹಾಗೂ ವೇತನ ದಾಖಲೆಗಳನ್ನು ಪರಿಶೀಲಿಸುವ ಮೂಲಕ ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.






