ಬಳ್ಳಾರಿ | ಮಹಿಳೆ, ಮಕ್ಕಳ ಸುರಕ್ಷತೆಗಾಗಿ ‘ಅಕ್ಕಪಡೆ’ ಯೋಜನೆ ಅನುಷ್ಠಾನ : ಡಿಸಿ ನಾಗೇಂದ್ರ ಪ್ರಸಾದ್ ಕೆ.

ಬಳ್ಳಾರಿ: ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸಲು ‘ಅಕ್ಕಪಡೆ’ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಅಕ್ಕಪಡೆ’ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಿಳೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಕಾನೂನು ಅರಿವು ಮೂಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಬಾಲ್ಯವಿವಾಹ, ಪೋಕ್ಸೋ ಪ್ರಕರಣಗಳಂತಹ ಅನಿಷ್ಟ ಪದ್ಧತಿಗಳ ಕುರಿತು ಮನೆಯಿಂದಲೇ ಅರಿವು ಆರಂಭವಾಗಬೇಕು. ಅಕ್ಕಪಡೆ ಯೋಜನೆಯ ಯಶಸ್ಸಿಗೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದು ಡಿಸಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪೆನ್ನೇಕರ್ ಮಾತನಾಡಿ, ದೌರ್ಜನ್ಯಕ್ಕೊಳಗಾದವರಿಗೆ ತಕ್ಷಣದ ಸಹಾಯ ಮತ್ತು ಕಾನೂನು ಸಲಹೆ ನೀಡಲು ಅಕ್ಕಪಡೆ ಸದಾ ಸಿದ್ಧವಿರುತ್ತದೆ. ಇದರ ಮೇಲ್ವಿಚಾರಣೆಗಾಗಿ ಸಮಿತಿ ರಚಿಸಲಾಗಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್. ಹೊಸಮನೆ ಮಾತನಾಡಿ, ಅಕ್ಕಪಡೆಯು ಕೌಟುಂಬಿಕ ಹಿಂಸೆ, ಕಳ್ಳಸಾಗಣೆ ಹಾಗೂ ಲೈಂಗಿಕ ದೌರ್ಜನ್ಯ ತಡೆಯುವ ಸಮುದಾಯ ಆಧಾರಿತ ಪಡೆಯಾಗಿದೆ ಎಂದು ಬಣ್ಣಿಸಿದರು. ಇದೇ ವೇಳೆ ಅವರು ಜ. 30ರ ವರೆಗೆ ನಡೆಯಲಿರುವ 'ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ'ದ ಮಹತ್ವವನ್ನು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಿಇಓ ಮಹಮ್ಮದ್ ಹಾರಿಸ್ ಸುಮೇರ್ ಅವರು ಬಾಲ್ಯವಿವಾಹ ತಡೆಗೆ ಗಸ್ತು ಪಡೆ ನಡೆಸುವ ಅಗತ್ಯತೆಯನ್ನು ಪ್ರತಿಪಾದಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ಎಂ. ಮಾತನಾಡಿ, ಈ ಪಡೆಯು ಪೊಲೀಸ್ ಮತ್ತು ಗೃಹರಕ್ಷಕ ಸಿಬ್ಬಂದಿಯನ್ನು ಒಳಗೊಂಡಿದ್ದು, ನಾಲ್ವರು ಮಹಿಳಾ ಸಿಬ್ಬಂದಿಯ ವಾಹನ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗಲಿದೆ. ತುರ್ತು ಸಂದರ್ಭದಲ್ಲಿ 112, 181 ಅಥವಾ 1098ಕ್ಕೆ ಕರೆ ಮಾಡಬಹುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ‘ಅಕ್ಕಪಡೆ’ ಯೋಜನೆಯ ಭಿತ್ತಿಪತ್ರ ಅನಾವರಣಗೊಳಿಸಲಾಯಿತು ಹಾಗೂ ಅಕ್ಕಪಡೆ ಗಸ್ತು ವಾಹನಕ್ಕೆ ಗಣ್ಯರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಎಎಸ್ಪಿ ಕೆ.ಪಿ. ರವಿ ಕುಮಾರ್ ಸ್ವಾಗತಿಸಿದರು.
ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್.ಎನ್., ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಶೇಕ್ ಸಾಬ್, ಪದವಿ ಪೂರ್ವ ಶಿಕ್ಷಣಾ ಇಲಾಖೆಯ ಉಪನಿರ್ದೇಶಕ ಲಕ್ಮಣ್ ಹಳ್ಳದಮನೆ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ.ಕೆ., ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದಪ್ಪ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭದ್ರ ದೇವಿ, ಮಹಿಳಾ ಪೊಲೀಸ್ ಠಾಣೆಯ ಆರಕ್ಷಕ ಉಪ ನೀರಿಕ್ಷಕ ರಮೇಶ್ ಕುಲಕರ್ಣಿ ಸೇರಿದಂತೆ ಪೊಲೀಸ್ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.







