Ballari | ಅಕ್ರಮ ಪಹಣಿ ಆರೋಪ; ಜಮೀನು ವಿವಾದಕ್ಕೆ ನ್ಯಾಯ ಕೋರಿ ರೈತರ ಮನವಿ

ಸಂಡೂರು/ಬಳ್ಳಾರಿ : ತಾಲೂಕಿನ ತೋರಣಗಲ್ಲು ಹೋಬಳಿಯ ಅಯ್ಯನಹಳ್ಳಿ ಗ್ರಾಮದ ಸರ್ವೆ ನಂ. 20/ಬಿ ಜಮೀನಿಗೆ ಸಂಬಂಧಿಸಿದಂತೆ ಪಹಣಿಯಲ್ಲಿ ಅಕ್ರಮವಾಗಿ ಹೆಸರು ಸೇರಿಸಲಾಗಿದೆ ಎಂದು ಆರೋಪಿಸಿ, ಮೂಲ ಪಟ್ಟದಾರರ ವಂಶಸ್ಥರು ಹಾಗೂ ರೈತರು ಸಂಡೂರು ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು. ಇದೇ ಜಮೀನು ವಿವಾದಕ್ಕೆ ಸಂಬಂಧಿಸಿ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಅಕ್ರಮ ಪ್ರವೇಶ, ಬೆದರಿಕೆ ಹಾಗೂ ಬೆಳೆ ನಾಶ ಪ್ರಕರಣವೂ ದಾಖಲಾಗಿದೆ.
ಮನವಿಯ ಪ್ರಕಾರ, ಮೂಲ ಪಟ್ಟದಾರ ಸತ್ಯಪ್ಪ ತಂದೆ ಸತ್ತಪ್ಪ ಅವರ ಹೆಸರಿನಲ್ಲಿದ್ದ ಸುಮಾರು 10 ಎಕರೆ 10 ಸೆಂಟ್ ಜಮೀನನ್ನು ಮೂರು ತಲೆಮಾರುಗಳಿಂದ ಅವರ ಕುಟುಂಬವೇ ಸಾಗುವಳಿ ಮಾಡಿಕೊಂಡು ಬರುತ್ತಿದೆ. ಆದರೆ, 1965ರಲ್ಲಿ ಯಾವುದೇ ಮೂಲ ದಾಖಲೆಗಳಿಲ್ಲದೆ ಬೋಯಾ ಸಕ್ರಪ್ಪ ಅವರ ಪುತ್ರ ಹನುಮಂತಪ್ಪ ಅವರ ಹೆಸರನ್ನು ಪಹಣಿಯಲ್ಲಿ ಅಕ್ರಮವಾಗಿ ಸೇರಿಸಲಾಗಿದೆ ಎಂದು ಆರೋಪಿಸಲಾಗಿದೆ.
ಬಳಿಕ ಹನುಮಂತಪ್ಪ ಅವರ ಪುತ್ರಿ ಚಿಕ್ಕಮ್ಮ ತಮ್ಮ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಂಡು, ನಂತರ ಆ ಜಮೀನನ್ನು ರಾಮಾರಾವ್ ಅವರಿಗೆ ಮಾರಾಟ ಮಾಡಿರುವುದರಿಂದ ಮೂಲ ಕುಟುಂಬಕ್ಕೆ ಅನ್ಯಾಯವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸ್ಥಳ ಪರಿಶೀಲನೆ ನಡೆಸಿ, ಅಕ್ರಮವಾಗಿ ಸೇರಿರುವ ಹೆಸರನ್ನು ಪಹಣಿಯಿಂದ ತೆಗೆದುಹಾಕಿ, ಮೂಲ ಪಟ್ಟದಾರರ ಹೆಸರನ್ನು ಮರು ಸೇರ್ಪಡೆಗೊಳಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸ್ವೀಕರಿಸಿದ ಗ್ರೇಡ್–2 ತಹಶೀಲ್ದಾರ್ ಶ್ರೀಮತಿ ಸುಧಾ ಅವರು, ದಾಖಲೆಗಳನ್ನು ಪರಿಶೀಲಿಸಿ ಕಾನೂನುಬದ್ಧವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದೇ ವಿವಾದದ ಹಿನ್ನೆಲೆಯಲ್ಲಿ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 95/2026ರಡಿ ಪ್ರಕರಣ ದಾಖಲಾಗಿದೆ. ದೂರುದಾರ ಎನ್.ಎಸ್. ಮರಿಸ್ವಾಮಿ ನೀಡಿರುವ ದೂರಿನ ಪ್ರಕಾರ, ಜೂನ್ 19ರಂದು ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕೆಲವರು ಗುಂಪಾಗಿ ಹೊಲಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿ, ಮಹಿಳೆಯರನ್ನು ತಳ್ಳಾಡಿದ್ದು, ಟ್ರ್ಯಾಕ್ಟರ್ ಮೂಲಕ ಸಜ್ಜೆ ಬೆಳೆ ಹಾನಿಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ಥಳೀಯರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಮುಖಂಡ ವಿ. ಶಂಕರ್, ಮರಿಸ್ವಾಮಿ, ಅಂಜಿನಿ, ಸುಬ್ಬಯ್ಯ, ಕಾಶಪ್ಪ, ಸತೀಶ್, ಸತ್ಯಪ್ಪ, ಕಾರ್ತಿಕ್, ಅಂಕೇರಿ ರುದ್ರಮ್ಮ, ಎನ್. ರುದ್ರಮ್ಮ, ತಿಮ್ಮಕ್ಕ, ರಮೇಶ್, ಮಾರೆಕ್ಕ, ಅಂಬರೀಶ ತಳವಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






