ಬಳ್ಳಾರಿ | ಅಮರಶಿಲ್ಪಿ ಜಕಣಾಚಾರಿಯ ಶಿಲ್ಪಕಲೆ ರಾಜ್ಯದ ಶ್ರೀಮಂತ ಪರಂಪರೆ : ಕೆ.ಇ. ಚಿದಾನಂದಪ್ಪ

ಬಳ್ಳಾರಿ : ಅಮರಶಿಲ್ಪಿ ಜಕಣಾಚಾರಿ ಅವರ ಶಿಲ್ಪಕಲೆ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದ್ದು, ಅವರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ನಗರದ ಕಾಳಮ್ಮ ಬೀದಿಯ ಕಾಳಮ್ಮ ಕಮಠೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಕಣಾಚಾರಿ ಅವರು ತುಮಕೂರು ಜಿಲ್ಲೆಯ ಕೈದಾಳ ಗ್ರಾಮದಲ್ಲಿ ಜನಿಸಿದ್ದು, ತಮ್ಮ ಸಂಪೂರ್ಣ ಜೀವನವನ್ನು ಶಿಲ್ಪಕಲೆಗೆ ಅರ್ಪಿಸಿದ್ದರು. ಅವರ ಶಿಲ್ಪ ಕೆತ್ತನೆಯಿಂದ ಬೇಲೂರು ಚನ್ನಕೇಶವ ಮತ್ತು ಹಳೇಬೀಡು ದೇವಾಲಯಗಳು ವಿಶ್ವವಿಖ್ಯಾತಿ ಪಡೆದಿವೆ ಎಂದು ಹೇಳಿದರು.
ಕರ್ನಾಟಕದ ಪ್ರತಿಯೊಂದು ಕಲ್ಲಿನಲ್ಲೂ ಶಿಲ್ಪಕಲೆ ಜೀವಂತವಾಗಿದೆ. ಆದರೆ ಆಧುನಿಕ ಯುಗದಲ್ಲಿ ಶಿಲ್ಪಕಲೆ ನಿಧಾನವಾಗಿ ನಶಿಸುತ್ತಿರುವುದು ಕಳವಳಕಾರಿ ಸಂಗತಿ. ಆದ್ದರಿಂದ ಅಮರಶಿಲ್ಪಿ ಜಕಣಾಚಾರಿ ಅವರ ಪರಂಪರೆಯನ್ನು ನಾವು ಉಳಿಸಿ ಬೆಳೆಸಬೇಕಾಗಿದೆ ಎಂದು ಅವರು ಕರೆ ನೀಡಿದರು.
ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ. ಮಾತನಾಡಿ, ಬೇಲೂರು ಹಾಗೂ ಹಳೇಬೀಡು ದೇವಾಲಯಗಳ ವಾಸ್ತುಶಿಲ್ಪ ಅತ್ಯಂತ ಐತಿಹಾಸಿಕವಾಗಿದ್ದು, ನಮ್ಮ ದೇಶದ ಸಂಸ್ಕೃತಿ ವೈಭವವನ್ನು ಪ್ರತಿಬಿಂಬಿಸುತ್ತವೆ. ಇಂತಹ ವಾಸ್ತುಶಿಲ್ಪ ಭಾರತದಲ್ಲಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಹೊಸಪೇಟೆಯ ಶ್ರೀ ಅಕ್ಷಯ ಪದವಿಪೂರ್ವ ಮತ್ತು ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ವೆಂಕಟೇಶ್ ಬಡಿಗೇರ್ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಸಂವಿಧಾನ ಪೀಠಿಕೆಯನ್ನು ಭೋದಿಸಲಾಯಿತು. ಇದೇ ಸಂದರ್ಭದಲ್ಲಿ ಸಮಾಜದ ಐದು ಜನ ಹಿರಿಯ ವಿಶ್ವಕರ್ಮ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ವಿಶ್ವಕರ್ಮ ವಿಕಾಸ ವೇದಿಕೆ ಅಧ್ಯಕ್ಷ ಚಂದ್ರಕಾಂತ್ ಸೋನರ್, ರಾಜಸ್ಥಾನಿ ವಿಶ್ವಕರ್ಮ ಅಧ್ಯಕ್ಷ ಮೇಘರಾಜ್, ಮಹಾನಗರ ಪಾಲಿಕೆ ಸದಸ್ಯೆ ಈರಮ್ಮ ಸುರೇಂದ್ರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ತ್ರಿವೇಣಿ ಪತ್ತಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ ಸೇರಿದಂತೆ ಸಮಾಜ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.







