Ballari | ಬೃಹತ್ ತ್ಯಾಜ್ಯ ಉತ್ಪಾದಕರಿಗೆ ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ

ಸಂಡೂರು/ಬಳ್ಳಾರಿ: ಸಂಡೂರು ಪುರಸಭೆ ವ್ಯಾಪ್ತಿಯ ಬೃಹತ್ ತ್ಯಾಜ್ಯ ಉತ್ಪಾದಕರಿಗಾಗಿ ಪುರಸಭೆ ಕಾರ್ಯಾಲಯದ ಕೆ.ಎಸ್. ವೀರಭದ್ರಪ್ಪ ಸಭಾಂಗಣದಲ್ಲಿ ಜಾಗೃತಿ ಸಭೆ ಆಯೋಜಿಸಲಾಯಿತು.
ಸಭೆಯಲ್ಲಿ ಬೃಹತ್ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವವರು ಸಾಧ್ಯವಾದಷ್ಟು ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡುವ ಮೂಲಕ ಪರಿಸರ ಹಾಗೂ ಸ್ವಚ್ಛತೆ ಕಾಪಾಡಬೇಕು ಎಂದು ತಿಳಿಸಲಾಯಿತು. ವಿಶೇಷವಾಗಿ ಕಲ್ಯಾಣ ಮಂಟಪಗಳ ಮಾಲೀಕರು ಹಾಗೂ ನಿರ್ವಹಣಾಧಿಕಾರಿಗಳಿಗೆ ಕಾರ್ಯಕ್ರಮಗಳ ಸಂದರ್ಭದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸುವ ಕುರಿತು ಜಾಗೃತಿ ಮೂಡಿಸಲಾಯಿತು.
ಮನೆ, ವಾಣಿಜ್ಯ ಮಳಿಗೆಗಳು ಹಾಗೂ ವಿವಿಧ ಸಂಸ್ಥೆಗಳಲ್ಲಿ ಉತ್ಪತ್ತಿಯಾಗುವ ಹಸಿ ಕಸ ಮತ್ತು ಒಣ ಕಸವನ್ನು ಮೂಲದಲ್ಲಿಯೇ ಪ್ರತ್ಯೇಕಿಸಿ, ಪುರಸಭೆಯ ತ್ಯಾಜ್ಯ ಸಂಗ್ರಹಣಾ ವಾಹನಕ್ಕೆ ನೀಡುವಂತೆ ಸೂಚಿಸಲಾಯಿತು. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಸಂಡೂರು ಪಟ್ಟಣವನ್ನು ಸ್ವಚ್ಛವಾಗಿಡಲು ಸಹಕರಿಸುವಂತೆ ಮನವಿ ಮಾಡಲಾಯಿತು.
ಅದೇ ರೀತಿ ಬಾರ್ ಮಾಲೀಕರು ಪ್ಲಾಸ್ಟಿಕ್ ಗ್ಲಾಸ್‌ಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, ಅದರ ಬದಲಾಗಿ ಸ್ಟೀಲ್ ಗ್ಲಾಸ್‌ಗಳನ್ನು ಬಳಸುವಂತೆ ಸೂಚಿಸಲಾಯಿತು. ಏಕಬಳಕೆಯ ಪ್ಲಾಸ್ಟಿಕ್‌ನಿಂದ ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಭೆಯಲ್ಲಿ ಅರಿವು ಮೂಡಿಸಲಾಯಿತು.
ಸಭೆಯಲ್ಲಿ ಪರಿಸರ ಅಭಿಯಂತರರಾದ ಅನ್ನಪೂರ್ಣ, ಆರೋಗ್ಯ ನಿರೀಕ್ಷಕಿ ಶಿವರಂಜಿನಿ, ಕಮ್ಯೂನಿಟಿ ಮೊಬೈಲೈಸರ್‌ಗಳಾದ ಕಾವ್ಯಾಂಜಲಿ, ಚೈತ್ರ, ಮಾರೆಕ್ಕ, ದೀನಾ ಹಾಗೂ ಅನಿತಾ ಉಪಸ್ಥಿತರಿದ್ದರು.






