Ballari | ಬಾಲ್ಯ ವಿವಾಹ ತಡೆಗೆ ಜಾಗೃತಿ ಕಾರ್ಯಕ್ರಮ

ಸಂಡೂರು/ಬಳ್ಳಾರಿ: ಬಾಲ್ಯ ವಿವಾಹವು ಮಕ್ಕಳ ಭವಿಷ್ಯವನ್ನು ಕತ್ತಲೆಗೆ ತಳ್ಳುವ ಗಂಭೀರ ಸಾಮಾಜಿಕ ಪಿಡುಗು ಹಾಗೂ ಶಿಕ್ಷಾರ್ಹ ಅಪರಾಧವಾಗಿದ್ದು, ಅದನ್ನು ತಡೆಗಟ್ಟಲು ಸಮಾಜದ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳು ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನಿರ್ದೇಶನದ ಮೇರೆಗೆ, ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಬಾಲ್ಯ ವಿವಾಹ ತಡೆ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಸಂಡೂರು ತಾಲೂಕಿನ ನಿಡುಗುರ್ತಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಅರೋಳ್, 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕ ಹಾಗೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಮದುವೆಯನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗುತ್ತದೆ. ಇಂತಹ ವಿವಾಹಗಳು ಕಾನೂನುಬಾಹಿರವಾಗಿದ್ದು, ತಪ್ಪಿತಸ್ಥರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ, ₹1 ಲಕ್ಷದವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ ಎಂದು ತಿಳಿಸಿದರು.
ಬಾಲ್ಯ ವಿವಾಹದಿಂದ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುವುದರ ಜೊತೆಗೆ ಅಪ್ರಾಪ್ತ ವಯಸ್ಸಿನ ಗರ್ಭಧಾರಣೆ, ಆರೋಗ್ಯ ಸಮಸ್ಯೆಗಳು, ರಕ್ತಹೀನತೆ, ತಾಯಿ ಮತ್ತು ಶಿಶು ಸಾವಿನ ಪ್ರಮಾಣ ಹೆಚ್ಚಳ, ಮಾನಸಿಕ ಖಿನ್ನತೆ, ಕೌಟುಂಬಿಕ ದೌರ್ಜನ್ಯ ಹಾಗೂ ಸಾಮಾಜಿಕ ಅಸಮಾನತೆಗಳಂತಹ ಗಂಭೀರ ಸಮಸ್ಯೆಗಳು ಉಂಟಾಗುತ್ತವೆ ಎಂದು ಅವರು ವಿವರಿಸಿದರು.
ಬಾಲ್ಯ ವಿವಾಹವನ್ನು ನಡೆಸುವವರು, ಪ್ರೇರೇಪಿಸುವವರು, ಭಾಗವಹಿಸುವವರು, ಪೋಷಕರು ಹಾಗೂ ಅದನ್ನು ತಡೆಯಲು ನಿರ್ಲಕ್ಷ್ಯ ವಹಿಸುವವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಾಲ್ಯ ವಿವಾಹದ ಕುರಿತು ಮಾಹಿತಿ ದೊರೆತಲ್ಲಿ ಮಕ್ಕಳ ಸಹಾಯವಾಣಿ 1098 ಅಥವಾ ತುರ್ತು ಸೇವೆ 112ಕ್ಕೆ ಕರೆ ಮಾಡಿ ದೂರು ನೀಡಬಹುದು. ದೂರುದಾರರ ಮಾಹಿತಿಯನ್ನು ಸಂಪೂರ್ಣ ಗೌಪ್ಯವಾಗಿಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್. ಶ್ರೀಕಾಂತ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅರೋಳ್, ಎನ್‌ಆರ್‌ಎಲ್‌ಎಂನ ಅನಿತಾ, ಪಂಚಾಯಿತಿ ಕಾರ್ಯದರ್ಶಿ ಮಂಜುನಾಥ, ಕರ ವಸೂಲಿಗಾರ ಈರಣ್ಣ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಶಿಕ್ಷಕರು, ವಿದ್ಯಾರ್ಥಿನಿಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.






