Ballari | ನಿಡುಗುರ್ತಿ ಶಾಲೆಯಲ್ಲಿ ಬ್ಯಾಗ್ ರಹಿತ ದಿನ ಆಚರಣೆ

ಸಂಡೂರು/ಬಳ್ಳಾರಿ: ತಾಲೂಕಿನ ನಿಡುಗುರ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಬ್ಯಾಗ್ ರಹಿತ ದಿನವನ್ನು ವಿಶೇಷವಾಗಿ ಆಚರಿಸಲಾಯಿತು. ಪಠ್ಯಪುಸ್ತಕದ ಹೊರೆ ಇಲ್ಲದೆ ಮಕ್ಕಳಿಗೆ ಜೀವನಾಧಾರಿತ ಹಾಗೂ ಅನುಭವಾಧಾರಿತ ಕಲಿಕೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.
‘ಅರಿವು–ಅನುಭವ–ಅವಲೋಕನ’ ಎಂಬ ಆಶಯದಡಿ ಚಟುವಟಿಕೆಗಳನ್ನು ರೂಪಿಸಲಾಗಿದ್ದು, ಅಂತರ್ಜಾಲ, ಮೊಬೈಲ್, ಸಾಮಾಜಿಕ ಮಾಧ್ಯಮ ಹಾಗೂ ವಿವಿಧ ಮಾಧ್ಯಮಗಳಲ್ಲಿ ಲಭ್ಯವಾಗುವ ಮಾಹಿತಿಯನ್ನು ಜವಾಬ್ದಾರಿಯುತವಾಗಿ ಬಳಸುವ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.
ಮೊಬೈಲ್ ಹಾಗೂ ಅಂತರ್ಜಾಲ ಬಳಕೆಯ ಸಂದರ್ಭದಲ್ಲಿ ವೈಯಕ್ತಿಕ ಮಾಹಿತಿ, ಫೋಟೋ, ಪಾಸ್‌ವರ್ಡ್ ಸೇರಿದಂತೆ ಖಾಸಗಿ ವಿವರಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು. ಅಪರಿಚಿತರಿಂದ ಬರುವ ಸಂದೇಶಗಳು, ಲಿಂಕ್‌ಗಳು ಹಾಗೂ ಆನ್‌ಲೈನ್ ಆಮಿಷಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ದೊರೆಯುವ ಪ್ರತಿಯೊಂದು ಮಾಹಿತಿಯನ್ನೂ ಸತ್ಯವೆಂದು ನಂಬದೆ, ಅದರ ಮೂಲ ಹಾಗೂ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ತಿಳಿಸಲಾಯಿತು.
ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸಿ ವಿವಿಧ ಸಂದರ್ಭಗಳ ಕುರಿತು ಚರ್ಚೆ, ಪ್ರಶ್ನೋತ್ತರ ಹಾಗೂ ಅಭಿಪ್ರಾಯ ಹಂಚಿಕೆ ಮೂಲಕ ಅನುಭವಾಧಾರಿತ ಕಲಿಕೆಗೆ ಅವಕಾಶ ಕಲ್ಪಿಸಲಾಯಿತು. ಮೊಬೈಲ್ ಅಥವಾ ಅಂತರ್ಜಾಲದಲ್ಲಿ ಎದುರಾಗಬಹುದಾದ ಸಂದರ್ಭಗಳನ್ನು ಉದಾಹರಣೆಯಾಗಿ ನೀಡಲಾಗಿದ್ದು, ಸುರಕ್ಷಿತ ಹಾಗೂ ಜವಾಬ್ದಾರಿಯುತವಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ವಿದ್ಯಾರ್ಥಿಗಳೇ ಚರ್ಚಿಸಿದರು.
ಇದರೊಂದಿಗೆ ಸೃಜನಶೀಲತೆ, ಸಂವಹನ ಕೌಶಲ್ಯ, ಸಮಸ್ಯೆ ಗುರುತಿಸುವ ಸಾಮರ್ಥ್ಯ ಹಾಗೂ ಸ್ವತಂತ್ರವಾಗಿ ಆಲೋಚಿಸುವ ಮನೋಭಾವ ಬೆಳೆಸುವ ಚಟುವಟಿಕೆಗಳಿಗೂ ಆದ್ಯತೆ ನೀಡಲಾಯಿತು. ವಿವಿಧ ಮಾಧ್ಯಮಗಳಲ್ಲಿ ಕಾಣುವ ಮಾಹಿತಿಯನ್ನು ಹೇಗೆ ಸ್ವೀಕರಿಸಬೇಕು, ಯಾವುದನ್ನು ನಂಬಬೇಕು ಮತ್ತು ಯಾವುದನ್ನು ಪರಿಶೀಲಿಸಬೇಕು ಎಂಬ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.
ರಾಷ್ಟ್ರೀಯ ಶಿಕ್ಷಣ ನೀತಿ–2020ರ ಆಶಯದಂತೆ ವಿದ್ಯಾರ್ಥಿಗಳ ಕಲಿಕೆಯನ್ನು ಅನುಭವಾಧಾರಿತ ಹಾಗೂ ಸಂತಸದಾಯಕವಾಗಿಸುವ ನಿಟ್ಟಿನಲ್ಲಿ ಬ್ಯಾಗ್ ರಹಿತ ದಿನಗಳನ್ನು ಉತ್ತೇಜಿಸಲಾಗುತ್ತಿದೆ. ಕೇಂದ್ರ ಶಿಕ್ಷಣ ಸಚಿವಾಲಯದ ‘10 Bagless Days’ ಮಾರ್ಗಸೂಚಿಗಳಲ್ಲಿಯೂ ಕಲೆ, ಕ್ವಿಜ್, ಕ್ರೀಡೆ, ಕೌಶಲ್ಯಾಧಾರಿತ ಚಟುವಟಿಕೆಗಳು ಹಾಗೂ ತರಗತಿಯ ಹೊರಗಿನ ಅನುಭವಗಳಿಗೆ ಅವಕಾಶ ಕಲ್ಪಿಸುವಂತೆ ಸೂಚಿಸಲಾಗಿದೆ.
ಶಾಲೆಯ ಮುಖ್ಯಗುರು ಎ. ಯರ್ರಿಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹ ಶಿಕ್ಷಕರಾದ ಶಶಿಧರ ಬಿ.ಎಂ., ಕಿರಣ್ ಕುಮಾರ್, ವೆಂಕಟೇಶ್, ಮಲ್ಲಿಕಾರ್ಜುನ್, ದೇವಿಶ್ರೀ, ಶೃತಿ, ಪಿರುಮ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.






