Ballari | ಪ್ರಭು ಕ್ಯಾಂಪ್ ಬಳಿ ಪ್ರಯಾಣಿಕರ ತಂಗುದಾಣ ನಿರ್ಮಿಸಲು ಭೀಮ್ ಆರ್ಮಿ ಒತ್ತಾಯ

ಕಂಪ್ಲಿ: ತಾಲ್ಲೂಕಿನ ನಂ. 10 ಮುದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಭು ಕ್ಯಾಂಪ್ ಬಳಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸುವಂತೆ ಒತ್ತಾಯಿಸಿ ಭೀಮ್ ಆರ್ಮಿ ಪದಾಧಿಕಾರಿಗಳು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಕೆ.ಎಸ್. ಮಲ್ಲನಗೌಡ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಸ್. ಯಲ್ಲಪ್ಪ ಮಾತನಾಡಿ, ಪ್ರಭು ಕ್ಯಾಂಪ್ ಮಾರ್ಗವಾಗಿ ಪ್ರತಿನಿತ್ಯ ನೂರಾರು ಪ್ರಯಾಣಿಕರು ಜಿಲ್ಲಾ ಕೇಂದ್ರ ಬಳ್ಳಾರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಚರಿಸುತ್ತಾರೆ. ಆದರೆ, ಹೆದ್ದಾರಿ ಬದಿಯಲ್ಲಿ ತಂಗುದಾಣ ಇಲ್ಲದ ಕಾರಣ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಬಿಸಿಲು ಮತ್ತು ಮಳೆಯಲ್ಲಿಯೇ ನಿಂತು ಬಸ್ಗಾಗಿ ಕಾಯುವಂತಾಗಿದೆ. ವಾಹನ ದಟ್ಟಣೆಯ ನಡುವೆ ರಸ್ತೆ ಬದಿಯಲ್ಲಿ ನಿಲ್ಲುವುದರಿಂದ ಅಪಘಾತದ ಭೀತಿಯೂ ಎದುರಾಗಿದೆ ಎಂದು ತಿಳಿಸಿದರು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸುಸಜ್ಜಿತ ತಂಗುದಾಣ ನಿರ್ಮಿಸಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಎಸ್. ಬಸವರಾಜ, ಎಚ್.ಎಂ. ಪರಶುರಾಮ್, ಕೆ. ಸ್ವಾಮಿ, ಗೌಳಿ ಮಂಜುನಾಥ, ಎಸ್. ತಿಪ್ಪೇಸ್ವಾಮಿ, ಸಂತೋಷ ಹಾಗೂ ಶಂಕ್ರಪ್ಪ ಉಪಸ್ಥಿತರಿದ್ದರು.




